ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ: ಕೆಳಗೆ ಬಿದ್ದ ತ್ರಿವರ್ಣ ಧ್ವಜ

ನವದೆಹಲಿ: ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆಯಲ್ಲಿ ಧ್ವಜಾರೋಹಣ ನಡೆಸುವಾಗ ದಾರ ಕಡಿದುಕೊಂಡ ಪಕ್ಷದ ತ್ರಿವರ್ಣ ಧ್ವಜ ಕೆಳಗೆ ಬಿದ್ದಿರುವ ಘಟನೆ ನಡೆದಿದೆ.

ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಅವರ ಸಮ್ಮುಖದಲ್ಲೇ ಈ ಅವಘಡ ನಡೆದಿದೆ.

ಕಾಂಗ್ರೆಸ್‍ ಪಕ್ಷದ 137ನೇ ಸಂಸ್ಥಾಪನಾ ದಿನಾಚರಣೆಯ ಪ್ರಯುಕ್ತ ದೆಹಲಿಯಲ್ಲಿರುವ ಪಕ್ಷದ ಪ್ರಧಾನ ಕಚೇರಿಯಲ್ಲಿ ಸರಳ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಧ್ವಜಾರೋಹಣ ಮಾಡಲು ಧ್ವಜಕ್ಕೆ ಕಟ್ಟಲಾಗಿದ್ದ ದಾರ ಎಳೆಯುತ್ತಿದ್ದರು.

ಅವರಿಗೆ ನೆರವಾಗಲು ಸೇವಾದಳದ ಕಾರ್ಯಕರ್ತರೊಬ್ಬರು ಜೋರಾಗಿ ಧ್ವಜಕ್ಕೆ ಕಟ್ಟಿದ್ದ ದಾರವನ್ನು ಜಗ್ಗಿದ್ದಾರೆ. ಇದರಿಂದ ಕಾಂಗ್ರೆಸ್‍ನ ತ್ರಿವರ್ಣ ಧ್ವಜ ಕೆಳಗೆ ಬಿದ್ದಿದೆ.

ಇದನ್ನು ಗಮನಿಸಿದ ಸೋನಿಯಾ ಗಾಂಧಿ ತಕ್ಷಣ ಧ್ವಜ ಹಿಡಿದುಕೊಂಡಿದ್ದಾರೆ.

ಇದರಿಂದ ಮುಜುಗರವಾದರೂ ಸಾವರಿಸಿಕೊಂಡು  ಮಡಚಿಕೊಂಡಿದ್ದ ಧ್ವಜವನ್ನು ಸೋನಿಯಾ ಗಾಂಧಿ ಅವರು ಬಿಡಿಸಿ ಸಾಂಕೇತಿಕವಾಗಿ ಪ್ರದರ್ಶನ ಮಾಡಿದ್ದಾರೆ. ನಂತರ ಸೇವಾದಳದ ಕಾರ್ಯಕರ್ತರು ರಾಷ್ಟ್ರ ಗೀತೆ ಗಾಯನ ಮಾಡಿ ಕಾರ್ಯಕ್ರಮ ಮುಂದುವರೆಸಿದ್ದಾರೆ.

ಧ್ವಜಾರೋಹಣದ ವೇಳೆ ಸೋನಿಯಾ ಗಾಂಧಿ ಅವರ ಜೊತೆ ಪಕ್ಷದ ಖಜಾಂಚಿ ಪವನ್ ಬನ್ಸಾಲ್, ಕಚೇರಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ನಿಂತಿದ್ದರು.