ಭ್ರೂಣ ಪತ್ತೆ ಮಾಡುವವರ ವಿರುದ್ಧ ಕಠಿಣ ಕ್ರಮ -ಸುಧಾಕರ್ ಎಚ್ಚರಿಕೆ

ಬೆಂಗಳೂರು:ಭ್ರೂಣ ಪತ್ತೆಗೆ ರಾಜ್ಯದಲ್ಲಿ ಅವಕಾಶವಿಲ್ಲ. ಭ್ರೂಣ ಪತ್ತೆ ಮಾಡುವ ತಜ್ಞರು, ತಾಂತ್ರಿಕ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಎಚ್ಚರಿಸಿದರು.

ರಾಷ್ಟ್ರೀಯ ಹೆಣ್ಣುಮಕ್ಕಳ ದಿನ ಹಿನ್ನೆಲೆಯಲ್ಲಿ ಮಾತನಾಡಿದ ಅವರು,ಭ್ರೂಣ ಪತ್ತೆ ಮಾಡುವ ಯಾವುದೇ ಸಂಸ್ಥೆ ಯಾಗಲಿ ಅಂತಹ ಸಂಸ್ಥೆಯ ಪರವಾನಗಿ ರದ್ದು ಪಡಿಸಲಾಗುವುದು ಎಂದು ಹೇಳಿದರು.

ಮಹಿಳೆಯರಿಗೆ ಸಮಾನತೆ ನೀಡುವುದು ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಆಶಯವಾಗಿದೆ. ಭ್ರೂಣ ಹತ್ಯೆ ವಿರುದ್ಧ ಜಾಗೃತಿ ಹಾಗೂ ಲಿಂಗ ಸಮಾನತೆ ತರಲು ಪ್ರಯತ್ನಿಸಬೇಕಿದೆ.

ಕೆಲ ವರ್ಷಗಳಿಂದ ಲಿಂಗಾನುಪಾತವೂ ಹೆಚ್ಚಾಗಿದೆ. 2001 ರಲ್ಲಿ 946 ಇದ್ದ ಲಿಂಗಾನುಪಾತ, 2018 ರಲ್ಲಿ 957 ಕ್ಕೇರಿದೆ. ಅಂದರೆ, ಹೆಣ್ಣುಮಕ್ಕಳ ಸಂಖ್ಯೆ ಹೆಚ್ಚಾಗಿರುವುದು ಆಶಾದಾಯಕವಾಗಿದೆ ಎಂದರು.

ಹೆಣ್ಣು ಮಕ್ಕಳ ಸಬಲೀಕರಣಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ.ಭ್ರೂಣ ಹತ್ಯೆಗೆ ಅಬಕಾಶ ನೀಡುವುದಿಲ್ಲ ಎಂದು ತಿಳಿಸಿದರು

ರಾಜ್ಯದಲ್ಲಿ ಕೋವಿಡ್ ಲಸಿಕೆಯ ಮೊದಲ ಡೋಸ್ ನಲ್ಲಿ ಶೇ.100 ಹಾಗೂ ಎರಡನೇ ಡೋಸ್ ನಲ್ಲಿ ಶೇ.85.3 ರಷ್ಟು ಪ್ರಗತಿಯಾಗಿದೆ ಎಂದು ಇದೇ ವೇಳೆ ಡಾ.ಕೆ.ಸುಧಾಕರ್ ತಿಳಿಸಿದರು.

15-17 ವರ್ಷದ ಮಕ್ಕಳಲ್ಲಿ ಶೇ.67.5ರಷ್ಟು ಮೊದಲ ಡೋಸ್ ಆಗಿದೆ. 4,85,818 ಬೂಸ್ಟರ್ ಡೋಸ್ ನೀಡಲಾಗಿದೆ. ಒಟ್ಟು 9,33,92,626 ಡೋಸ್ ಗಳನ್ನು ಈವರೆಗೆ ನೀಡಲಾಗಿದೆ. ಲಸಿಕಾಕರಣದಲ್ಲಿ ರಾಜ್ಯ ಮುಂಚೂಣಿಯಲ್ಲಿದ್ದು, ಉತ್ತಮ ಪ್ರಗತಿ ಇದೆ ಎಂದು ತಿಳಿಸಿದರು.

ಕೆಲ ಜಿಲ್ಲೆಗಳಲ್ಲಿ ಕೋವಿಡ್ ಪ್ರಕರಣ ಏರುತ್ತಿದೆ. ಮತ್ತೆ ಎರಡು ಮೂರು ವಾರಗಳಲ್ಲಿ ಕಡಿಮೆಯಾಗಲಿದೆ. ಆಸ್ಪತ್ರೆ ದಾಖಲಾತಿಗೆ ಹೆಚ್ಚು ಗಮನ ನೀಡಲಾಗಿದೆ ಎಂದು ಹೇಳಿದರು.

ಕಳೆದ ಮೂರು ದಿನದಲ್ಲಿ ರೋಗ ಲಕ್ಷಣ ಇಲ್ಲದವರಿಗೆ ಪರೀಕ್ಷೆ ಮಾಡುವ ಅವಶ್ಯಕತೆ ಇಲ್ಲ ಎಂದು ಐಸಿಎಂಆರ್ ಹೇಳಿದೆ. ಅದರನ್ವಯ ಕ್ರಮ ವಹಿಸಲಾಗುತ್ತಿದೆ ಎಂದರು.

ಜನವರಿಯಲ್ಲಿ 32 ಲಕ್ಷ ಜನರಿಗೆ ಕೊರೊನಾ ಪರೀಕ್ಷೆ ಮಾಡಲಾಗಿದೆ. ಯಾವ ರಾಜ್ಯವೂ ಇಷ್ಟು ಅಧಿಕ ಸಂಖ್ಯೆಯಲ್ಲಿ ಪರೀಕ್ಷೆ ಮಾಡಿಲ್ಲ. ಒಟ್ಟು 6 ಕೋಟಿ ಪರೀಕ್ಷೆಗಳನ್ನು ಮಾಡಿದ್ದು, ಇದು ಬೇರೆ ರಾಜ್ಯಗಳಿಗೆ ಮಾದರಿಯಾಗಿದೆ ಎಂದರು.