ಕೋವಿಡ್ 3ನೇ ಅಲೆ ಎದುರಿಸಲು ಮೂರು ಮಂತ್ರ ಪಾಲಿಸಿ:ರಾಜ್ಯಪಾಲರ ಕರೆ

ಬೆಂಗಳೂರು:ಇದೀಗ ಕೋವಿಡ್ 3ನೇ ಅಲೆ ಎದುರಾಗಿದ್ದು,ಪ್ರತಿಯೊಬ್ಬರೂ ಭೌತಿಕ ಅಂತರ, ಮುಖ ಗವಸು ಹಾಗೂ ಸಾನಿಟೈಸರ್ ಬಳಕೆ(ಎಸ್‍ಎಂಎಸ್) ಎಂಬ ಮೂರು ಮಂತ್ರಗಳನ್ನು ಪಾಲಿಸಬೇಕೆಂದು ರಾಜ್ಯಪಾಲ ತಾವರ್ ಚಂದ್ ಗೆಹ್ಲೊಟ್ ರಾಜ್ಯದ ಜನತೆಗೆ ಕರೆ ನೀಡಿದ್ದಾರೆ.

ದೇಶದ 73ನೇ ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿದ ಬಳಿಕ ಅವರು ರಾಜ್ಯವನ್ನು ಉದ್ದೇಶಿಸಿ ಮಾತನಾಡಿದರು.

ಈಗ ಎದುರಾಗಿರುವ ಪರಿಸ್ಥಿತಿಯನ್ನು ಅತ್ಯಂತ ಗಂಭೀರವಾಗಿ ನಿಭಾಯಿಸಬೇಕು. ಯಾವುದೇ ರೀತಿಯಲ್ಲೂ ಅಲಕ್ಷ್ಯ ಮಾಡುವುದು ಸರಿಯಲ್ಲ. ನಿಮ್ಮ ಹಾಗೂ ಬೇರೊಬ್ಬರ ಆರೋಗ್ಯದ ದೃಷ್ಟಿಯಿಂದ ಮೂರು ಮಂತ್ರಗಳನ್ನು ನಿರಂತರವಾಗಿ ಪಾಲಿಸುವ ಮೂಲಕ ಕೋವಿಡ್ ವಿರುದ್ದ ಹೋರಾಟ ಮಾಡಬೇಕೆಂದು ಮನವಿ ಮಾಡಿದರು.

ತಮ್ಮ 16 ಪುಟಗಳ ಭಾಷಣದಲ್ಲಿ ಯಾವುದೇ ಹೊಸ ಕೊಡುಗೆಗಳಾಗಲಿ ಅಥವಾ ಯೋಜನೆಗಳನ್ನೇನು ಮಾಡದೆ ಕೇವಲ ಸರ್ಕಾರ ಕೋವಿಡ್ ನಿರ್ವಹಣೆಗೆ ಕೈಗೊಂಡಿರುವ ಕ್ರಮಗಳು, ಜನತೆಗೆ ನೀಡಿರುವ ಕಾರ್ಯಕ್ರಮಗಳ ಬಗ್ಗೆ ಬೆಳಕು ಚೆಲ್ಲಿದರು.

2020-21ರಲ್ಲಿ ಜಗತ್ತು ಕೋವಿಡ್ ಸವಾಲನ್ನು ನಿಭಾಯಿಸಲು ಹೆಣಗಾಡಿತು. ಆದರೆ ನಮ್ಮ ಸರ್ಕಾರ ಇದನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸಿದೆ. ಕೋವಿಡ್ ಪರಿಣಾಮವನ್ನು ತಗ್ಗಿಸಲು ಹಗಲಿರುಳು ಶ್ರಮಿಸಿದೆ, ಇದಕ್ಕೆ ಜನತೆಯ ಸಹಕಾರವು ಮುಖ್ಯವಾಗಿದೆ ಎಂದು ಪ್ರಶಂಸಿಸಿದರು.

ಹೆಚ್ಚುವರಿ ಆರೋಗ್ಯ, ಮೂಲಸೌಕರ್ಯವನ್ನು ಸೃಷ್ಟಿಸಿ ಆಕ್ಷಿಜನ್ ಸಿಲಿಂಡರ್‍ಗಳು, ವೆಂಟಿಲೇಟರ್‍ಗಳ ಉತ್ಪಾದನೆ ಸಾಮರ್ಥ್ಯವನ್ನು ಹೆಚ್ಚಿಸಲಾಗಿದೆ. ದೇಶವು ಎರಡು ಲಸಿಕೆಗಳನ್ನು ಉತ್ಪಾದಿಸಿ ವಿದೇಶಗಳಿಗೂ ಸಹ ರಫ್ತು ಮಾಡಿತು. ರಾಜ್ಯದ ಪ್ರತಿಯೊಬ್ಬರಿಗೂ ಲಸಿಕೆ ಹಾಕಿಸಲು ಕೇಂದ್ರದ ಜೊತೆ ನಾವು ನಿರಂತರವಾಗಿ ಸಂಪರ್ಕ ಇಟ್ಟುಕೊಂಡಿದ್ದೇವೆ ಎಂದು ಹೇಳಿದರು.

ಈ ಸಾಂಕ್ರಾಮಿಕ ರೋಗದ ವಿರುದ್ಧ ಅವಿರತವಾಗಿ ಶ್ರಮಿಸಿದ ವೈದ್ಯರು, ನರ್ಸ್‍ಗಳು, ಆರೋಗ್ಯ ಮತ್ತು ಮುಂಚೂಣಿ ಕಾರ್ಯಕರ್ತರಿಗೆ ವಿಶೇಷ ಕೃತಜ್ಞತೆಗಳನ್ನು  ರಾಜ್ಯಪಾಲರು ಸಲ್ಲಿಸಿದರು.

ಕೋವಿಡ್ ಹರಡುವಿಕೆಯನ್ನು ತಡೆಗಟ್ಟಲು ಹೊಸ ತಂತ್ರಜ್ಞಾನ ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರ ತೆಗೆದುಕೊಂಡ ಕ್ರಮವನ್ನು ನಾನು ಸ್ವಾಗತಿಸುತ್ತೇನೆ, ದೇಶದ ಇತರೆ ಭಾಗಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಕೋವಿಡ್ ಸಾವಿನ ಪ್ರಮಾಣ ಕಡಿಮೆ ಇದೆ ಎಂದು ಹೇಳಿದರು.

ಉತ್ತರ ಕರ್ನಾಟಕದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಉಂಟಾದ ವಿಪತ್ತಿನ ಸವಾಲನ್ನು ಸರ್ಕಾರ ಸಮರ್ಥವಾಗಿ ಎದುರಿಸಿದೆ. ದೇಶದ ಪ್ರಗತಿಪರ ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಈ ಸಂದರ್ಭದಲ್ಲಿ ಜನತೆಗಾಗಿ ಹೊಸ ಯೋಜನೆಗಳನ್ನು ಹಾಗೂ ಕಾರ್ಯಕ್ರಮಗಳನ್ನು ಘೋಷಣೆ ಮಾಡಲಾಗಿದೆ ಎಂದು ತಿಳಿಸಿದರು.

ಅಮೃತ ಗ್ರಾಮ ಪಂಚಾಯ್ತಿಗಳ ಅಮೃತರಥ, ಅಮೃತ ಗ್ರಾಮೀಣ ವಸತಿ ಯೋಜನೆ, ಅಮೃತ ನಿರ್ಮಲ, ಅಮೃತ ಮೂಲಸೌಕರ್ಯ ಕಾರ್ಯಕ್ರಮ, ಅಮೃತ ಅಂಗನವಾಡಿ ಕೇಂದ್ರಗಳು, ಅಮೃತ ನಗರೋತ್ಥಾನ ಸೇರಿದಂತೆ 19 ಅಮೃತ ಮಹೋತ್ಸವ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಿದ್ದೇವೆ. 2023 ಆಗಸ್ಟ್ 15ರೊಳಗೆ ಇದನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲು ಗುರಿ ನೀಡಲಾಗಿದೆ ಎಂದರು.

ಕೃಷಿ ವಲಯದಲ್ಲಿ ಬದಲಾವಣೆ ತರಲು ಸರ್ಕಾರ ಜಲಾನಯನ ಅಭಿವೃದ್ಧಿಗೆ ಗಮನಹರಿಸಿದೆ. 2021-22ನೇ ಸಾಲಿನಲ್ಲಿ 1472 ಕೋಟಿ ಮೊತ್ತದ ಜಲಾನಯನ ಅಭಿವೃದ್ದಿ ಕಾಮಗಾರಿಗೆ ಅನುಮೋದನೆ ನೀಡಿದೆ ಎಂದು ತಿಳಿಸಿದರು.

ಆರೋಗ್ಯ ಇಲಾಖೆಯಲ್ಲಿ ವೈದ್ಯಾಕಾರಿಗಳನ್ನು ಭರ್ತಿ ಮಾಡಲು ವಿಶೇಷ ಸಮಿತಿಯನ್ನು ರಚಿಸಿ ಆರು ತಿಂಗಳ ಅವಯೊಳಗೆ 746 ತಂತ್ರಜ್ಞರು, 1048 ಸಾಮಾನ್ಯ ಕರ್ತವ್ಯ ವೈದ್ಯಾಕಾರಿಗಳನ್ನು ನೇಮಕ ಮಾಡಲಾಗಿದೆ.

ಸಾರ್ವಜನಿಕರಿಗೆ ಅನುಕೂಲವಾಗುವಂತೆ ಏಕೀಕೃತ ಸಾರ್ವಜನಿಕ ಕುಂದುಕೊರತೆ ನಿವಾರಣಾ ಸೇವಾ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಹೇಳಿದರು.

ಸಮಾಜದ ದುರ್ಬಲ ವರ್ಗಗಳ ಅಭಿವೃದ್ಧಿಗಾಗಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಜೀವನದ ಆರ್ಥಿಕತೆ ಸುಧಾರಿಸಲು ಹಾಗೂ ನ್ಯಾಯಬದ್ದ ಹಕ್ಕುಗಳನ್ನು ಒದಗಿಸಲು ಸರ್ಕಾರ ಬದ್ದವಾಗಿದೆ ಎಂದು ತಿಳಿಸಿದರು

ಬೆಳೆಯುತ್ತಿರುವ ಬೆಂಗಳೂರಿಗೂ ನಮ್ಮ ಸರ್ಕಾರ ವಿಶೇಷ ಆದ್ಯತೆ ನೀಡಿದೆ. ಸ್ಮಾರ್ಟ್ ಯೋಜನೆಯಡಿ 158.27 ಕಿ.ಮೀ ಮಾರ್ಗವನ್ನು ಒಳಗೊಂಡ 77 ರಸ್ತೆಗಳನ್ನು ವೈಟ್ ಪಾಪಿಂಗ್ ಗೆ ಆಯ್ಕೆ ಮಾಡಲಾಗಿದೆ. ಈ ಪೈಕಿ 83.91 ಕಿ.ಮೀ ರಸ್ತೆ ಕಾಮಗಾರಿ ಪೂರ್ಣಗೊಂಡಿದೆ ಎಂದು ರಾಜ್ಯಪಾಲರು ಹೇಳಿದರು.