ಅಂಗಾಂಗ ದಾನದ ಬಗ್ಗೆ ಹೆಚ್ಚು ಜಾಗೃತಿ ಅಗತ್ಯ -ಡಾ.ಕೆ.ಸುಧಾಕರ್

ಬೆಂಗಳೂರು:ಬದುಕಿರುವಾಗ ರಕ್ತದಾನ ಮಾಡುವಂತೆಯೇ ಮೃತರಾದ ಬಳಿಕ ಅಂಗಾಂಗ ದಾನ ಮಾಡುವ ಬಗ್ಗೆ ಹೆಚ್ಚು ಜಾಗೃತಿ ಮೂಡಿಸಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.

ಬೆಂಗಳೂರಿನ ಸ್ಪರ್ಶ್ ಆಸ್ಪತ್ರೆಯಲ್ಲಿ ಅಂಗಾಂಗ ಕಸಿ ಆಸ್ಪತ್ರೆ ಉದ್ಘಾಟನಾ ಕಾರ್ಯಕ್ರಮದ ಬಳಿಕ ಅವರು ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದರು.

ದೇಶದಲ್ಲಿ ಸುಮಾರು 2 ಲಕ್ಷ ಅಂಗಾಂಗ ಕಸಿಗೆ ಬೇಡಿಕೆ ಇದೆ.ಆದರೆ ಇದರಲ್ಲಿ ಶೇ.4 ರಷ್ಟು ಅಂಗಾಂಗ ದೊರೆಯುತ್ತಿದೆ ಹಾಗಾಗಿ  ಅನೇಕರು ಅಂಗಾಂಗಗಳು ದೊರೆಯದೆ ನಿಧನ ಹೊಂದುತ್ತಿದ್ದಾರೆ ಎಂದು ವಿಷಾಧಿಸಿದರು.

ವ್ಯಕ್ತಿ ಮರಣ ಹೊಂದಿದ ಬಳಿಕ ಅಂಗಾಂಗಗಳ ಮೂಲಕ ಎಂಟು ಜನರ ಜೀವ ಉಳಿಸಲು ಸಾಧ್ಯವಿದೆ. ಆದರೆ ತಪ್ಪು ತಿಳಿವಳಿಕೆಯಿಂದ ಅಂಗಾಂಗ ದಾನ  ಕಡಿಮೆಯಾಗಿದೆ.

ಬದುಕಿರುವಾಗ ರಕ್ತದಾನ ಮಾಡುವಂತೆಯೇ ಸತ್ತ ನಂತರ ಅಂಗಾಂಗ ದಾನ ಮಾಡುವ ಅಗತ್ಯವಿದೆ ಇದರಿಂದ ಇತರರ ಜೀವ ಉಳಿಸಬಹುದು ಈ ಬಗ್ಗೆ ಹೆಚ್ಚು ಜಾಗೃತಿ ಮೂಡಿಸಬೇಕಿದೆ ಎಂದು ಹೇಳಿದರು.

ಸರ್ಕಾರಿ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಜನ್ ಗಳಿಗೂ ಅಂಗಾಂಗ ಕಸಿ ಬಗ್ಗೆ ತರಬೇತಿ ನೀಡುವ ಕುರಿತು ತಜ್ಞರಲ್ಲಿ ಕೋರಲಾಗಿದೆ. ಈ ಮೂಲಕ ಸರ್ಕಾರಿ ಆಸ್ಪತ್ರೆಗಳಿಗೆ ದಾಖಲಾಗುವ ಬಡ ಕುಟುಂಬಗಳ  ಅಗತ್ಯವಿರುವವರಿಗೆ ಆಧುನಿಕ ತಂತ್ರಜ್ಞಾನ ಬಳಸಿ ಅಂಗಾಂಗ ಕಸಿ ಮಾಡಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

ನಿಮ್ಹಾನ್ಸ್ ನಲ್ಲಿ ಮೆದುಳು ಸತ್ತ ಪ್ರಕರಣಗಳು ಹೆಚ್ಚಾಗಿ ದೊರೆಯುತ್ತವೆ. ಆದ್ದರಿಂದ ಈ ಸಂಸ್ಥೆಯೊಂದಿಗೆ ಅಂಗಾಂಗ ಕಸಿಗಾಗಿ ಟೈ ಅಪ್ ಮಾಡಿಕೊಳ್ಳಲು ಸಲಹೆ ನೀಡಲಾಗಿದೆ. ನಾಲ್ಕು ಹಳೆ ಮೆಡಿಕಲ್ ಕಾಲೇಜುಗಳಲ್ಲಿ ಅಂಗಾಂಗ ಕಸಿ ಕೇಂದ್ರಗಳನ್ನು ಸಜ್ಜುಗೊಳಿಸಲಾಗುತ್ತಿದೆ ಎಂದು ಸುಧಾಕರ್ ತಿಳಿಸಿದರು.

ಕೇಂದ್ರ ಆರೋಗ್ಯ ಸಚಿವರು ವೀಡಿಯೋ ಕಾನ್ಫರೆನ್ಸ್ ನಡೆಸಿ ಕೋವಿಡ್ ನಿರ್ವಹಣೆ ಕುರಿತು ಮಾಹಿತಿ ಪಡೆದಿದ್ದಾರೆ. ಮನೆ ಐಸೋಲೇಶನ್ ನಲ್ಲಿರುವವರ ಮೇಲೆ ಹೆಚ್ಚು ನಿಗಾ ಇಡುವಂತೆ ಸೂಚಿಸಿದ್ದಾರೆ ಎಂದರು.

ಆಪ್ತಮಿತ್ರ ಮೂಲಕ ಟೆಲಿ ಟ್ರಯಾಜಿಂಗ್ ಮೊದಲಾದ ಮಾಹಿತಿಗಳನ್ನು ಅವರು ಪಡೆದಿದ್ದಾರೆ ಎಂದು ಹೇಳಿದರು.

ಶೇ.95 ರಷ್ಟು ಸೋಂಕಿತರು ಮನೆಯಲ್ಲಿದ್ದರೂ ಆತಂಕವಿಲ್ಲ. ಶೇ.4 ರಷ್ಟು ಜನರು ಮಾತ್ರ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದರು.

ರಾಜ್ಯದಲ್ಲಿ ಮರಣ ಪ್ರಮಾಣ ಶೇ. 0.005ರಷ್ಟು ಮಾತ್ರ ಇದೆ. ಇದು ಅಧಿಕವಲ್ಲ ಎಂದರು.

ಇತರೆ ಅಸ್ವಸ್ಥತೆ ಸೇರಿದಂತೆ ಸಾವಿಗೆ ಹಲವು ಕಾರಣಗಳಿವೆ. ಇದಕ್ಕಾಗಿ ಡೆತ್ ಆಡಿಟ್ ನಡೆಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು.

ದೂರದೃಷ್ಟಿಯನ್ನೊಳಗೊಂಡ ಆರೋಗ್ಯ ಕ್ಷೇತ್ರದ ವಿಷನ್ ವರದಿ  ದೇಶದಲ್ಲೇ ಮೊದಲ ಬಾರಿಗೆ ತಯಾರಾಗುತ್ತಿದೆ. ಸುಮಾರು 750 ತಜ್ಞರು ಇದರ ರಚನೆಯಲ್ಲಿ ಭಾಗಿಯಾಗಿದ್ದಾರೆ ಇದನ್ನು ಸಿಎಂ ಬಿಡುಗಡೆ ಮಾಡಲಿದ್ದಾರೆ‌ ಎಂದು ಮಾಹಿತಿ ನೀಡಿದರು.