ಪಣಜಿ:ಗೋವಾದಲ್ಲಿ ಭ್ರಷ್ಟ ಬಿಜೆಪಿ ಸರ್ಕಾರ ಇತ್ತು ಎಂಬ ಡಿ.ಕೆ.ಶಿವಕುಮಾರ್ ಆರೋಪಕ್ಕೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತಿರುಗೇಟು ನೀಡಿದ್ದಾರೆ.
ಗೋವಾದ ಪಣಜಿಯಲ್ಲಿ ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಈ ಕುರಿತು ಪ್ರತಿಕ್ರಿಯಿಸಿದ ಸಿ. ಟಿ ರವಿ ಅವರು, ಡಿ.ಕೆ.ಶಿವಕುಮಾರ್ ಮಾಡಿರುವ ಆರೋಪ ಭೂತದ ಬಾಯಲ್ಲಿ ಭಗವದ್ಗೀತೆ ಎಂಬಂತಿದೆ ಎಂದು ವಾಗ್ದಾಳಿ ನಡೆಸಿದರು.
ಭ್ರಷ್ಟಾಚಾರ ಆರೋಪದ ಮೇಲೆ ಜೈಲಿಗೆ ಹೋಗಿದ್ದ ಡಿಕೆಶಿ ಜಾಮೀನಿನ ಮೇಲೆ ಹೊರ ಬಂದಿದ್ದಾರೆ,ಅವರಿಗೆ ಬಿಜೆಪಿ ಬಗ್ಗೆ ಮಾತನಾಡುವ ಯೋಗ್ಯತೆ ಇಲ್ಲ ಎಂದರು.
ಅವರ ಬಾಯಲ್ಲಿ ಭ್ರಷ್ಟಾಚಾರ ಬಗ್ಗೆ ಮಾತು ಬರುತ್ತಿವೆ. ಭೂತದ ಬಾಯಲ್ಲಿ ಬರುವ ಭಗವದ್ಗೀತೆಗೂ, ಡಿಕೆಶಿ ಬಾಯಲ್ಲಿ ಬರುವ ಭ್ರಷ್ಟಾಚಾರದ ಮಾತಿಗೂ ಏನೂ ವ್ಯತ್ಯಾಸವಿಲ್ಲ ಎಂದು ಕಿಡಿಕಾರಿದರು.
ಗೋವಾದಲ್ಲಿ ಬಿಜೆಪಿಯ ಮನೋಹರ್ ಪರಿಕ್ಕರ್, ಪ್ರಮೋದ್ ಸಾವಂತ್ ನೇತೃತ್ವದ ಸರ್ಕಾರ ಒಳ್ಳೆಯ ಆಡಳಿತ ಕೊಟ್ಟಿದೆ. ಇದು ಹಳೆ ಗೋವಾ ಅಲ್ಲ, ಹೊಸ ಗೋವಾ. ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವ ಗೋವಾ ಎಂದು ಕಾಂಗ್ರೆಸ್ ಮಾಡಿರುವ ಆರೋಪಕ್ಕೆ ಟಾಂಗ್ ನೀಡಿದರು.
ಬಿಜೆಪಿ ಸಾಮಾನ್ಯ ಜನರಲ್ಲಿ ರಾಜಕೀಯ ನಾಯಕತ್ವ ಬೆಳೆಸುತ್ತದೆ. ಹೀಗಾಗಿ ಕಾಂಗ್ರೆಸ್‍ನಿಂದ ಗೋವಾ ಜನತೆಗೆ ಪಾಠ ಹೇಳಿಸಿಕೊಳ್ಳುವಂತಹ ಸ್ಥಿತಿ ಇಲ್ಲ. ಡಿಕೆಶಿ ಅಲ್ಲ, ಇನ್ನೂ ನೂರು ಜನ ಬರಲಿ, ಗೋವಾದಲ್ಲಿ ಬಿಜೆಪಿ ಸರ್ಕಾರ ಬರುವುದು ನಿಶ್ಚಿತ. ಬಂದ ದಾರಿಗೆ ಸುಂಕ ಇಲ್ಲವೆಂದು ಅವರು ವಾಪಸ್ ಹೋಗಬೇಕು ಎಂದು ಸಿ.ಟಿ.ರವಿ ತಿರುಗೇಟು ನೀಡಿದರು.

