ವರಿಷ್ಠರ ಭೇಟಿ ಮಾಡಿ ಚರ್ಚಿಸಿ; ಸಂಪುಟ ವಿಸ್ತರಣೆ ಕುರಿತು ತೀರ್ಮಾನ -ಸಿಎಂ

ಬೆಂಗಳೂರು:ಸಂಪುಟ ವಿಸ್ತರಣೆ ಸಂಬಂಧ ವರಿಷ್ಠರ ಭೇಟಿಗೆ ಸಮಯ ಕೇಳಿದ್ದೇನೆ. ಅವಕಾಶ ಸಿಕ್ಕ ಕೂಡಲೇ ದೆಹಲಿಗೆ ಹೋಗಿ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ  ಹೇಳಿದರು.

ತಮ್ಮ ಹುಟ್ಟುಹಬ್ಬ ಹಾಗೂ 6 ತಿಂಗಳು ಆಡಳಿತ ಪೂರೈಸಿದ ಅಂಗವಾಗಿ  ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದ ನಂತರ ಸಿಎಂ ಮಾಧ್ಯಮ ಪ್ರತಿ ನಿಧಿಗಳೊಂದಿಗೆ  ಮಾತನಾಡಿದರು.

ಯಡಿಯೂರಪ್ಪನವರು ನನಗೆ ಆಶೀರ್ವಾದ ಮಾಡಿದ್ದಾರೆ. ಅಲ್ಲದೆ ಒಳ್ಳೆಯ ಆಡಳಿತ ನೀಡಿದ್ದೀರಿ. ಹೀಗೇ ಮುಂದುವರೆಯಿರಿ ಎಂದು ಹಾರೈಸಿದ್ದಾರೆ ಎಂದು ತಿಳಿಸಿದರು.

ಇದೇ ವೇಳೆ ಸಂಪುಟ ವಿಸ್ತರಣೆ ಕುರಿತು ಸಮಾಲೋಚನೆ ನಡೆಸಿದೆವು. ದೆಹಲಿ ವರಿಷ್ಠರ ಭೇಟಿಗೆ ಸಮಯ ಕೇಳಲಾಗಿದೆ. ಅವರು ಅವಕಾಶ ಕೊಟ್ಟ ಕೂಡಲೇ ಅವರೊಂದಿಗೆ ಚರ್ಚಿಸಿ ಸಂಪುಟ ವಿಸ್ತರಣೆ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು. 

ಅಲ್ಲದೆ ದೆಹಲಿಯಲ್ಲಿ ಸಂಸದರೊಂದಿಗೆ ಸಭೆ ನಡೆಸುವುದಾಗಿ  ತಿಳಿಸಿದರು.

ನಾನ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ. ಆದರೂ ರಾಜ್ಯಾದ್ಯಂತ ನನ್ನ ಜನರು, ಸ್ನೇಹಿತರು, ಶಾಸಕರು, ಕ್ಷೇತ್ರದ ಜನತೆ ಶುಭಾಶಯ ತಿಳಿಸಿದ್ದಾರೆ ಎಂದರು.

ಪ್ರಧಾನಿ ಮೋದಿ ಅವರು ಟ್ವಿಟ್ ಮೂಲಕ ನನ್ನ ಹುಟ್ಟುಹಬ್ಬಕ್ಕೆ ಶುಭ ಕೋರಿದರು ರಾಷ್ಟ್ರಪತಿ ಕೂಡ ವಿಶ್ ಮಾಡಿದ್ದಾರೆ. ಅವರೆಲ್ಲರಿಗೂ ನಾನು ಧನ್ಯವಾದ ಹೇಳಬಯಸುತ್ತೇನೆ ಎಂದರು.

ನಮ್ಮ ಸರ್ಕಾರಕ್ಕೆ 6 ತಿಂಗಳು ತುಂಬಿದೆ. ಹಾಗಾಗಿ ಆಡಳಿತ ಪಕ್ಷಿನೋಟದ ಒಂದು ಕಿರು ಹೊತ್ತಿಗೆ ತರಲಾಗಿದೆ ಎಂದು ತಿಳಿಸಿದರು.

ಕೋವಿಡ್, ಪ್ರವಾಹ ನಿರ್ವಹಣೆ ಮುಂತಾದ ವಿಷಯಗಳನ್ನು ಒಳಗೊಂಡ ಪುಸ್ತಕವನ್ನು ಬಿಡುಗಡೆ ಮಾಡುತ್ತಿದ್ದೇವೆ. ರಾಜ್ಯದ ಆರ್ಥಿಕ ದೃಷ್ಟಿಯಿಂದ ಒಳ್ಳೆಯ ಬಜೆಟ್ ನೀಡಬೇಕಿದೆ. ಅದಕ್ಕಾಗಿ ಒತ್ತು ನೀಡುತ್ತಿದ್ದೇವೆ ಎಂದು ಹೇಳಿದರು.