ಪ್ರತಾಪ್ ಸಿಂಹ,ರಾಮದಾಸ್, ನಾಗೇಂದ್ರಗೆ ಕಟೀಲ್ ಕಡಕ್ ಎಚ್ಚರಿಕೆ

ಬೆಂಗಳೂರು:ಪಕ್ಷದ ಶಿಸ್ತು ಉಲ್ಲಂಘಿಸಿ ಹಾದಿ,ಬೀದಿಯಲ್ಲಿ ರಂಪಾಟ ಮಾಡುವುದು ಅಥವಾ ಮಾಧ್ಯಮಗಳ ಮುಂದೆ ಹೇಳಿಕೆಗಳನ್ನು ನೀಡಿದರೆ ಶಿಸ್ತುಕ್ರಮ ಜರುಗಿಸುವುದು ಅನಿವಾರ್ಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್ ಅವರು ಸಂಸದ ಪ್ರತಾಪ್ ಸಿಂಹ  ಹಾಗೂ ಶಾಸಕ ರಾಮದಾಸ್ ಮತ್ತಿತರರಿಗೆ ಎಚ್ಚರಿಕೆ ನೀಡಿದ್ದಾರೆ.

ಕಟೀಲ್ ಅವರು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ, ಶಾಸಕರಾದ ಎಲ್.ನಾಗೇಂದ್ರ ಹಾಗೂ ಎಸ್.ಎ.ರಾಮದಾಸ್ ಅವರಿಗೆ ದೂರವಾಣಿ ಕರೆ ಮಾಡಿ ತಕ್ಷಣವೇ ನಿಮ್ಮ ವಾಕ್ಸಮರಕ್ಕೆ ಕಡಿವಾಣ ಹಾಕಬೇಕು ಎಂದು ಕಡಕ್ ಸೂಚನೆ ನೀಡಿದ್ದಾರೆ.

ಏನೇ ಸಮಸ್ಯೆಗಳಿದ್ದರೂ ಪಕ್ಷದ ವೇದಿಕೆಯಲ್ಲಿ ಚರ್ಚಿಸಬೇಕು.ಅದು ಬಿಟ್ಟು ಒಬ್ಬರ ಮೇಲೊಬ್ಬರು ಹಾದಿಬೀದಿಯಲ್ಲಿ ಟೀಕೆ ಮಾಡುವುದು, ಆರೋಪ, ವೈಯಕ್ತಿಕ ನಿಂದನೆ ಮಾಡುವುದು ಯಾರಿಗೂ ಶೋಭೆ ತರುವುದಿಲ್ಲ. ಇದೇ ಪ್ರವೃತ್ತಿ ಮುಂದುವರೆದರೆ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

ಈಗಾಗಲೇ ನಾನು ಜಿಲ್ಲಾಧ್ಯಕ್ಷರಿಗೆ ವರದಿ ನೀಡಲು ಸೂಚಿಸಿದ್ದೇನೆ. ಕಳೆದ ಒಂದು ವಾರದಿಂದ ಸಂಸದರು ಮತ್ತು ಶಾಸಕರ ನಡುವೆ ನಡೆದಿರುವ ಗದ್ದಲದ ವಿಷಯವನ್ನು ವರಿಷ್ಠರ ಗಮನಕ್ಕೂ ತರುತ್ತೇನೆ. ಪಕ್ಷದ ಶಿಸ್ತು ಉಲ್ಲಂಘಿಸುವಂತಹ ಕೆಲಸ ಮಾಡಿದರೆ ಸಹಿಸುವುದಿಲ್ಲ ಎಂದು ವಾರ್ನಿಂಗ್ ಮಾಡಿದ್ದಾರೆ.

ಪಕ್ಷದ ಶಿಸ್ತು ಉಲ್ಲಂಘಿಸುವ ಪ್ರವೃತ್ತಿಯನ್ನು ಯಾರೂ ತೋರಬಾರದು. ಇದರಿಂದ ಕಾರ್ಯಕರ್ತರಿಗೆ ಕೆಟ್ಟ ಸಂದೇಶ ರವಾನೆಯಾಗುತ್ತದೆ. ಜನಪ್ರತಿನಿಧಿಗಳಾದ ನೀವು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂದು ಕಿವಿಮಾತು ಹೇಳಿದ್ದಾರೆ.

ಪಕ್ಷದ ಸಂಘಟನೆ ಹಾಗೂ ಅಭಿವೃದ್ದಿ ವಿಚಾರದಲ್ಲಿ ಭಿನ್ನಾಭಿಪ್ರಾಯಗಳಿದ್ದರೆ ಮುಕ್ತವಾಗಿ ಚರ್ಚೆ ಮಾಡಿ. ಆದರೆ ಮಾಧ್ಯಮದ ಮುಂದೆ ಅಥವಾ ಸಾರ್ವಜನಿಕವಾಗಿ ಚರ್ಚಿಸುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ಯೋಜನೆ ಜನಪರವಾಗಿದ್ದರೆ ಅದಕ್ಕೆ ಯಾರೂ  ಅಡ್ಡಿಪಡಿಸಬಾರದು. ಜನರಿಗೆ ತೊಂದರೆಯಾಗುವುದಿದ್ದರೆ ಅದನ್ನು ಅನುಷ್ಠಾನ ಮಾಡುವ ಅಗತ್ಯವಿಲ್ಲ. ಪಕ್ಷದ ಕಚೇರಿಗೆ ಬಂದು ಇದರ ಬಗ್ಗೆ ಮೂವರೂ ವರದಿ ನೀಡಬೇಕು ಎಂದು ಸೂಚಿಸಿದ್ದಾರೆ.