ಅಧಿಕಾರಕ್ಕಾಗಿ ಸಿದ್ದರಹೀಮಯ್ಯ ಆಗುತ್ತಾರೆ – ಪ್ರತಾಪ್ ಸಿಂಹ ಟೀಕೆ

ಮೈಸೂರು: ಸಿದ್ದರಾಮಯ್ಯನವರು ಚುನಾವಣೆಗೋಸ್ಕರ ಸಿದ್ದರಹೀಮಯ್ಯ ಅಂತ ಬೇಕಾದರೂ ಬದಲಾಗಿ ಬಿಡುತ್ತಾರೆ ಎಂದು ಸಂಸದ ಪ್ರತಾಪ್ ಸಿಂಹ ಟೀಕಿಸಿದ್ದಾರೆ.

ಮಾಧ್ಯಮ‌ ಪ್ರತಿ ನಿಧಿಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅಧಿಕಾರಕ್ಕೋಸ್ಕರ ಏನೂ ಬೇಕಾದರೂ ಹೇಳಿಕೆಗಳನ್ನು ನೀಡುತ್ತಾರೆ. ಅವರ ಹೇಳಿಕೆಗಳನ್ನು ಯಾರೂ ಗಂಭೀರವಾಗಿ ತೆಗೆದುಕೊಳ್ಳುವುದು ಬೇಡ ಎಂದು  ತಿಳಿಸಿದರು.

ಹಿಜಾಬ್ ನಿರ್ಬಂಧ ಕುರಿತು ಸಿದ್ದರಾಮಯ್ಯ ಪ್ರತಿಕ್ರಿಯಿಸಿ ಮುಸ್ಲಿಂ ಹೆಣ್ಣುಮಕ್ಕಳ  ಸ್ವಾತಂತ್ರ್ಯ, ಶಿಕ್ಷಣ ಕಿತ್ತುಕೊಳ್ಳುವ ಷಡ್ಯಂತ್ರ್ಯ ಎಂದು ಹೇಳಿರುವುದಕ್ಕೆ ಪ್ರತಾಪ್ ಸಿಂಹ ಪ್ರತಿಕ್ರಿಯಿಸಿ ಸಿದ್ದರಾಮಯ್ಯನವರ ಹೇಳಿಕೆಗಳನ್ನು ಯಾರೂ ಗಂಭೀರ ವಾಗಿ ತೆಗೆದುಕೊಳ್ಳಬೇಡಿ ಎಂದರು.

ಅವರು ರಾಜಕಾರಣಕ್ಕೋಸ್ಕರ ಬಹಳಷ್ಟು ಮಾತುಗಳನ್ನು ಆಡುತ್ತಿರುತ್ತಾರೆ. ಗೋರಿಪಾಳ್ಯದ ಜಮೀರ್ ಅವರು ಚಾಮರಾಜಪೇಟೆಗೆ ಚುನಾವಣೆಗೆ ನಿಲ್ಲಿ ಬನ್ನಿ ಅಂತ ಕರೆಯುತ್ತಿದ್ದಾರೆ.

ಅಲ್ಲಿ ಹೋಗಿ ಚುನಾವಣೆಗೆ  ನಿಂತಾಗ ಯಾರಾದರೂ  ಸಿದ್ದರಾಮಯ್ಯನವರೇ ನಿಮ್ಮ ಹೆಸರಿನಲ್ಲಿ  ರಾಮ ಇದೆ ಅಂತ ಪ್ರಶ್ನೆ ಮಾಡಿದರೆ ಚುನಾವಣೆಗೋಸ್ಕರ ಸಿದ್ದರಹೀಮಯ್ಯ ಅಂತ ಬೇಕಾದರೂ ಹೆಸರಿಟ್ಟುಕೊಂಡು ಬಿಡುತ್ತಾರೆ ಎಂದು ಟೀಕಿಸಿದರು.

ಅವರದ್ದೇ ಸರ್ಕಾರ 2017-18ರ ಸಂದರ್ಭದಲ್ಲಿ ಇದ್ದಾಗ ಯಾವ ಸಮವಸ್ತ್ರ ಸಂಹಿತೆಯನ್ನು  ಮಾಡಿದ್ದರೋ ಅದಕ್ಕನುಗುಣವಾಗಿಯೇ  ಉಡುಪಿಯಲ್ಲೂ ಅಲ್ಲಿನ ಕಾಲೇಜು ಆಡಳಿತ ಮಂಡಳಿ ಹಾಗೂ ಕರ್ನಾಟಕ ರಾಜ್ಯ ಸರ್ಕಾರ ಪೂರಕವಾಗಿ ನಡೆದುಕೊಂಡಿದೆ ಎಂದು ಹೇಳಿದರು.

ಸಮವವಸ್ತ್ರ ತಲೆತಲಾಂತರದಿಂದ ಬಂದಿದೆ,  ಮೇಲ್ಜಾತಿ, ಕೆಳಜಾತಿ, ಬಡವ, ಬಲ್ಲಿದ, ಆ ಧರ್ಮ, ಈ ಧರ್ಮ ಎಂಬ ತಾರತಮ್ಯವಿಲ್ಲದೆ ಸಮಾನತೆಯ ಭ್ರಾತೃತ್ವದ ವಾತಾವರಣದಲ್ಲಿ ಮಕ್ಕಳು ಶಿಕ್ಷಣವನ್ನು ಪಡೆದುಕೊಳ್ಳಬೇಕು ಅನ್ನುವ ಕಾರಣಕ್ಕೋಸ್ಕರ ತಂದಿರುವಂಥದ್ದು ಎಂದು ತಿಳಿಸಿದರು.

ಅದಕ್ಕೆ ಅನುಗುಣವಾಗಿ ಉಡುಪಿಯ ಶಾಲಾ ಕಾಲೇಜುಗಳ ಆಡಳಿತ ಮಂಡಳಿ ಕೂಡ ನಡೆದುಕೊಳ್ಳುತ್ತಿದೆ. ಶಾಸಕ ರಘುಪತಿ ಭಟ್ ಇರಬಹುದು, ಸಚಿವರುಗಳಾದ ಬಿ.ಸಿ.ನಾಗೇಶ್, ಆರಗ ಜ್ಞಾನೇಂದ್ರ ಸರ್ಕಾರಿ ನಿಯಮವನ್ನು ಕಟ್ಟು ನಿಟ್ಟಾಗಿ ಜಾರಿಗೊಳಿಸುತ್ತಿದ್ದಾರೆ. ಅದಕ್ಕಾಗಿ ನಾನು  ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ಹೇಳಿದರು.

ಇದು ಬ್ರಿಟಿಷರ ಇಂಡಿಯಾ ಅದಲ್ಲ. ಭರತ ಖಂಡ, ಹೆಸರೇ ಭಾರತ, ಭರತ ಖಂಡ ಅಥವಾ ಭಾರತ ಇದೆಯಲ್ಲ, ಅದರ ಬುನಾದಿಯೇ ಹಿಂದೂ ಧರ್ಮ ಎಂದು ಸಿಂಹ ಹೇಳಿದರು.