ಬೆಂಗಳೂರು: ಹಿಜಾಬ್ ವಿವಾದವನ್ನು ವಿದ್ಯಾರ್ಥಿನಿಯರ ಮೂಲಕ ಆಡಿಸುತ್ತಿರುವ ಕೀಲಿಕೈ ಬೇರೆಯೇ ಇದೆ. ಕಾಂಗ್ರೆಸ್ ಈ ವ್ಯೂಹದ ಮೆದುಳು, ಎಸ್‍ಡಿಪಿಐ ಅದರ ದೇಹ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಗಂಭೀರ ಆರೋಪ ಮಾಡಿದ್ದಾರೆ.
ಹಿಜಾಬ್ ಕೇವಲ ವಿವಾದವಲ್ಲ, ಮೂಲಭೂತವಾದವನ್ನು ರಾಜಕೀಯಕ್ಕೆ ಬಳಸಿಕೊಳ್ಳುವ ವ್ಯವಸ್ಥಿತ ಸಂಚು ಎಂದು ಅವರು ಟ್ವಿಟರ್ ನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹಿಜಾಬ್ ವಿವಾದ ಸಂಬಂಧ ವಿದ್ಯಾರ್ಥಿನಿಯರ ಪರ ವಾದ ಮಾಡುತ್ತಿರುವ ವಕೀಲರ ಪೈಕಿ ಒಬ್ಬರು ಪಂಚರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ನ್ಯಾಯವಾದಿಗಳ ಸಮಿತಿಯ ಅಧ್ಯಕ್ಷರು.
ಈಗ ಈ ವಿವಾದ ಪಂಚರಾಜ್ಯಗಳ ಚುನಾವಣೆಯ ಫಲಿತಾಂಶದ ಬಗ್ಗೆ ಮಾತನಾಡುತ್ತಿದೆ ಎಂದರೆ ಇದೊಂದು ಕಾಂಗ್ರೆಸ್ ಪ್ರೇರಿತ ಟೂಲ್ ಕಿಟ್ ಭಾಗವಲ್ಲವೇ ಎಂದು ಅವರು ಕಟೀಲ್ ಪ್ರಶ್ನಿಸಿದ್ದಾರೆ.
ವಿಚಾರಣೆ ಮುಂದೂಡುವಂತೆ ಮಧ್ಯಂತರ ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳಲ್ಲಿ ನಾಲ್ವರು ಅಪ್ರಾಪ್ತರು. ಇವರು ಹಿಜಾಬ್ ವಿವಾದವನ್ನು ಪಂಚರಾಜ್ಯಗಳ ಚುನಾವಣೆಗೆ ಥಳುಕು ಹಾಕುತ್ತಿದ್ದಾರೆ ಎಂದರೆ ಅರ್ಥವೇನು?. ಈ ವಿದ್ಯಾರ್ಥಿನಿಯರು ಬೇರೆಯವರ ತಾಳಕ್ಕೆ ಕುಣಿಯುವ ಗೊಂಬೆಗಳು ಎಂದು ಅರ್ಥವಲ್ಲವೇ? ಎಂದು ಹೇಳಿದ್ದಾರೆ.

