ನವದೆಹಲಿ: ಹಿಂದೂ ಸಂಘಟನೆಗಳ ಬಹುದಿನಗಳ ಬೇಡಿಕೆ ಕಡೆಗೂ ಈಡೇರಿದಂತಾಗಿದ್ದು,ಅಂತಿಮವಾಗಿ ಪಿಎಫ್‌ಐ ಬ್ಯಾನ್ ಆಗಿದೆ.
ದೇಶಾದ್ಯಂತ ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿರುವ ಬಗ್ಗೆ ಪುರಾವೆ ದೊರೆತ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಪಿಎಫ್ ಐ ವಿರುದ್ಧ ಕಡೆಗೂ ಮಹತ್ವದ ಕ್ರಮ ಕೈಗೊಂಡಿದೆ.
ಮಂಗಳವಾರ ತಡರಾತ್ರಿ ಅಧಿಸೂಚನೆ ಹೊರಡಿಸುವ ಮೂಲಕ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ ಐ)ಯನ್ನು ನಿಷೇಧಿಸಿ ಗೃಹ ಸಚಿವಾಲಯ ಆದೇಶ ಹೊರಡಿಸಿದೆ.
ವಿವಾದಾತ್ಮಕ ಸಂಘಟನೆ ಪಾಪ್ಯುಲರ್ ಫ್ರಂಟ್ ಇಂಡಿಯಾವನ್ನು ಐದು ವರ್ಷಗಳ ಕಾಲ ನಿಷೇಧಿಸಲಾಗಿದೆ.
ಪಿಎಫ್ ಐ ವಿರುದ್ಧ ಎನ್ ಐಎ ಯ ಮೊದಲ ದಾಳಿ ಸೆಪ್ಟೆಂಬರ್ 22 ರಂದು ಮತ್ತು ಎರಡನೇ ಸುತ್ತಿನ ದಾಳಿ ಸೆಪ್ಟೆಂಬರ್ 27 ರಂದು ನಡೆಯಿತು.
ಮೊದಲ ಸುತ್ತಿನಲ್ಲಿ 106 ಪಿಎಫ್‌ಐ ಸದಸ್ಯರನ್ನು ಬಂಧಿಸಲಾಗಿದೆ. ಸೆಪ್ಟೆಂಬರ್ 27 ರಂದು 247 ಜನರನ್ನು ಬಂಧಿಸಲಾಯಿತು.
ಎನ್‌ಐಎ ಸೇರಿದಂತೆ ಇತರ ತನಿಖಾ ಸಂಸ್ಥೆಗಳು ಪಿಎಫ್‌ಐ ವಿರುದ್ಧ ಪುರಾವೆಗಳನ್ನು ಪತ್ತೆ ಹಚ್ಚಿ ನಂತರ ಗೃಹ ಸಚಿವಾಲಯದಿಂದ ಕ್ರಮಕ್ಕೆ ಮನವಿ ಮಾಡಿತ್ತು.
ಈಗ ಗೃಹ ಸಚಿವಾಲಯವು ಪಿಎಫ್ ಐ ನ್ನು 5 ವರ್ಷಗಳ ಕಾಲ ನಿಷೇಧಿಸಿದೆ.
ಆಪರೇಷನ್ ಆಕ್ಟೋಪಸ್‌ನ 2ನೇ ಸುತ್ತಿನಲ್ಲಿ ಎನ್‌ಐಎ, ಎಟಿಎಸ್ ಮತ್ತು ರಾಜ್ಯ ಪೊಲೀಸರು ಪಿಎಫ್‌ಐನ ಮಿಷನ್ 2047 ಗೆ ಸಂಬಂಧಿಸಿದ ಸಾಕಷ್ಟು ಪುರಾವೆಗಳನ್ನು ವಶಪಡಿಸಿಕೊಂಡಿವೆ.
ಇದೇ ಈ ಸಂಘಟನೆಯ ಮೇಲಿನ ನಿಷೇಧಕ್ಕೆ ಕಾರಣವಾಗಿರಬಹುದು.
ಭಾರತದಲ್ಲಿ ಅಂತರ್ಯುದ್ಧ ಸೃಷ್ಟಿಸುವುದು, 2047 ರ ವೇಳೆಗೆ ಆಪರೇಷನ್ ಗಜ್ವಾ-ಎ-ಹಿಂದ್ ಪೂರ್ಣಗೊಳಿಸುವುದು ಮತ್ತು ಇಸ್ಲಾಮಿಕ್ ಆಡಳಿತವನ್ನು ಹೇರುವುದು ಈ ಮೂರು ಪ್ರಮುಖ ಕಾರಣಗಳನ್ನು ಪಿಎಫ್ ಐ ನಿಷೇಧಕ್ಕೆ ಪರಿಗಣಿಸಲಾಗಿದೆ.

