ಮೈಸೂರು: ಜೀವದ ಹಂಗನ್ನು ತೊರೆದು ಕರ್ತವ್ಯ ನಿರ್ವಹಿಸುವ ಪೊಲೀಸ್ ಸಿಬ್ಬಂದಿಗಳಿಗೆ ಅತಿ ಹೆಚ್ಚು ಗೌರವ ನೀಡುವ ಕೆಲಸ ನಮ್ಮೆಲ್ಲರದಾಗಬೇಕು ಎಂದು ಮೈಸೂರು ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ಡಾ. ಎಂ. ಮಾಲತಿ ಪ್ರಿಯಾ ಹೇಳಿದರು.
ಮೈಸೂರಿನಲ್ಲಿರುವ ಹುತಾತ್ಮರ ಸ್ಮಾರಕ ಉದ್ಯಾನವನದಲ್ಲಿ ಏರ್ಪಡಿಸಿದ್ದ ಕರ್ತವ್ಯದಲ್ಲಿ ನಿರತರಾಗಿದ್ದಾಗ ಮೃತಪಟ್ಟ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳ ಬಲಿದಾನ ಮತ್ತು ಸೇವೆಯನ್ನು ಸ್ಮರಿಸುವ ಪೊಲೀಸ್ ಹುತಾತ್ಮರ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ನಾಗರಿಕರಿಗೆ ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಸಹಕರಿಸುವ ಮನೋಭಾವ ಬರಬೇಕು ಎಂದು ತಿಳಿಸಿದರು.
ಪೊಲೀಸ್ ಸಂಸ್ಮರಣಾ ದಿನದಂದು ಹುತಾತ್ಮರಾದ ಧೈರ್ಯಶಾಲಿ ಪೊಲೀಸ್ ಸಿಬ್ಬಂದಿಯನ್ನು ಹೆಮ್ಮೆಯಿಂದ ನೆನಪಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ ಎಂದರು.
ಪೊಲೀಸ್ ಮಹಾನಿರೀಕ್ಷಕರು ದಕ್ಷಿಣ ವಲಯ ಹಾಗೂ ಮೈಸೂರು ನಗರ ಮೈಸೂರು ಜಿಲ್ಲೆ, ಕರ್ನಾಟಕ ಪೊಲೀಸ್ ಅಕಾಡೆಮಿ, ಕೆ ಎಸ್ ಆರ್ ಪಿ ಪೊಲೀಸ್ ಘಟಕಗಳು ಈ ಕಾರ್ಯಕ್ರಮ ಹಮ್ಮಿಕೊಂಡಿದ್ದವು.
ಮೃತರ ಗೌರವಾರ್ಥ ಮೂರು ಸುತ್ತು ಗಾಳಿಯಲ್ಲಿ ಫೈರಿಂಗ್ ನಡೆಸಲಾಯಿತು.
ಈ ಸಂದರ್ಭದಲ್ಲಿ ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್ , ಡಿಸಿಪಿಗಳಾದ ಗೀತಾ ಪ್ರಸನ್ನ ಎಂ.ಎಸ್, ಪ್ರದೀಪ್ ಗುಂಟಿ ಮತ್ತಿತರರು ಉಪಸ್ಥಿತರಿದ್ದರು.

