ಮೈಸೂರು: ಚಾಮುಂಡಿ ಬೆಟ್ಟದ ಅರಣ್ಯದಲ್ಲಿ ಆಯುರ್ವೇದ ಗಿಡಮರಗಳನ್ನ ಬೆಳೆಸಲು ಜಿಲ್ಲಾಡಳಿತ ಮುಂದಾಗಬೇಕು ಎಂದು ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ ಆಗ್ರಹಿಸಿದ್ದಾರೆ
ಅರಿವು ಸಂಸ್ಥೆಯು ಜಯನಗರದಲ್ಲಿರುವ ಸರ್ಕಾರಿ ಶಾಲೆಯಲ್ಲಿ ಆಯುರ್ವೇದ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಆಯುಷ್ ಆಯುರ್ವೇದ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿವಿಧ ಜಾತಿಯ ಆಯುರ್ವೇದ ಗಿಡಮೂಲಿಕೆಗಳನ್ನು ನೆಡುವ ಮೂಲಕ ಮಕ್ಕಳಿಗೆ ಆಯುರ್ವೇದದಿಂದ ಆಗುವ ಉಪಯೋಗಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು
ಭಾರತದಲ್ಲಿ ಅಯುರ್ದೇದಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ, ಋಷಿಮುನಿಗಳು ಮತ್ತು ನಮ್ಮ ಪೂರ್ವಜರು ಪರಿಸರದಲ್ಲಿ ನೈಸರ್ಗಿಕವಾಗಿ ಬೆಳೆದ ಗಿಡಮರಗಳಿಂದ ಚಳಿಗಾಲ, ಮಳೆಗಾಲ, ಬೇಸಿಗೆಕಾಲಕ್ಕೆ ಸಂಭದಪಟ್ಟ ನೈಸರ್ಗಿಕ ಔಷಧಿಯುಕ್ತ ಆಹಾರಗಳನ್ನ ಸಿದ್ಧಪಡಿಸುತ್ತಿದ್ದರು ಎಂದು ಹೇಳಿದರು.
ಇದರಿಂದ ಮನುಷ್ಯನ ಜೀವಿತಾವಧಿ ಆಯಸ್ಸು ವೃದ್ಧಿಸುತ್ತಿತ್ತು ಆದರೆ ಇಂದು ಎಲ್ಲವೂ ರಾಸಾಯನಿಕಮಯ, ಕಲುಷಿತ ಆಹಾರಗಳು ಮನುಷ್ಯನ ನೆಮ್ಮದಿ ಹಾಳು ಮಾಡುತ್ತಿದೆ ಎಂದು ತಿಳಿಸಿದರು.
ಕೊರೋನಾದಿಂದ ಗುಣಮುಖವಾಗಲು ರೋಗನಿರೋಧಕ ಶಕ್ತಿ ಹೆಚ್ಚಿಸಲು ಆಯುರ್ವೇದ ರಾಮಬಾಣವಾಯಿತು, ಮೈಸೂರಿನಲ್ಲಿ ಚಾಮುಂಡಿಬೆಟ್ಟ ಸೇರಿದಂತೆ ಇನ್ನಿತರ ಅರಣ್ಯವಲಯಗಳಲ್ಲಿ ಆಯುರ್ವೇದ ಗಿಡಮರಗಳನ್ನ ಬೆಳಸಲು ಜಿಲ್ಲಾಡಳಿತ ಮುಂದಾಗಬೇಕು ಎಂದು ಸಲಹೆ ನೀಡಿದರು.
ಯುವಪೀಳಿಗೆಯಲ್ಲಿ ಅದರಲ್ಲೂ ವಿದ್ಯಾರ್ಥಿಗಳಲ್ಲಿ ಆಯುರ್ವೇದದ ಬಗ್ಗೆ ಅರಿವು ಮೂಡಿಸಲು, ಆರೋಗ್ಯ ಆಹಾರ ಮಹತ್ವವನ್ನ ತಿಳಿಸಲು ಶಿಕ್ಷಣ ಇಲಾಖೆ ಯೋಜನೆ ರೂಪಿಸಬೇಕಾಗಿದೆ ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಆಯುರ್ವೇದ ಹೆಸರಿನಲ್ಲಿ ಸರ್ಕಾರದ ಅನುಮತಿ ಪಡೆಯದೇ ಕೆಲವು ಹರ್ಬಲ್ ಕಂಪನಿಗಳು ವ್ಯಾಪಾರ ಮಾಡುತ್ತಿರುವುದು ಬೇಸರದ ಸಂಗತಿ ಎಂದು ಕಳವಳ ವ್ಯಕ್ತಪಡಿಸಿದರು.
ಸರ್ಕಾರಿ ಆಯುರ್ವೇದಿಕ್ ಕಾಲೇಜಿನ ಪ್ರಿನ್ಸಿಪಾಲ್ ಡಾ॥ಗಜಾನನ ಹೆಗಡೆ ಆಯುರ್ವೇದ ಭಾರತದ ಪ್ರಾಚೀನ ಚಿಕಿತ್ಸಾ ಪದ್ಧತಿಯಾಗಿದ್ದು ಇಂದು ವಿಶ್ವದ ಗಮನ ಸೆಳೆದಿದೆ ಎಂದು ತಿಳಿಸಿದರು.
ಸಹಜ ಬದುಕಿನ ಆಹಾರಶೈಲಿಯಲ್ಲಿ ಆಯುರ್ವೇದದ ಚಿಕಿತ್ಸಾ ಗುಣಗಳ ಅಂಶಗಳಿದ್ದು ಇದಕ್ಕೆ ಹೆಚ್ಚು ಒತ್ತು ಕೊಡಬೇಕೆಂದು ತಿಳಿಸಿದರು.
ಕಾಂಗ್ರೆಸ್ ಯುವ ಮುಖಂಡರಾದ ಎನ್. ಎಂ. ನವೀನ್ ಕುಮಾರ್ ,ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್ ,ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಮ ಅಯ್ಯಂಗಾರ್ ,ಅರಿವು ಸಂಸ್ಥೆ ಅಧ್ಯಕ್ಷರ ಶ್ರೀಕಾಂತ್ ಕಶ್ಯಪ್ ,ಅಜಯ್ ಶಾಸ್ತ್ರಿ, ಶಿವಕುಮಾರ್, ಸುಚೀಂದ್ರ, ಮುಖ್ಯ ಶಿಕ್ಷಕ ಶಿವಕುಮಾರ್, ಸಹ ಶಿಕ್ಷಕ ಸುಜ್ಞಾನ ಮೂರ್ತಿ ಹಾಜರಿದ್ದರು.

