ಭೂಪಾಲ್ : ಮಧ್ಯಪ್ರದೇಶದ ರೇವಾ ಹೆದ್ದಾರಿಯಲ್ಲಿ ಟ್ರಕ್ಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ15 ಕೂಲಿ ಕಾರ್ಮಿಕರು ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ನಡೆದಿದೆ.
ಈ ಅಪಘಾತದಲ್ಲಿ 40 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ.
ಸುಮಾರು 100 ಮಂದಿ ಪ್ರಯಾಣಿಕರಿದ್ದ ಬಸ್ ಉತ್ತರ ಪ್ರದೇಶದ ಗೋರಖ್ಪುರಕ್ಕೆ ತೆರಳುತ್ತಿದ್ದಾಗ ರೇವಾದ ಸುಹಾಗಿ ಪಹಾರಿ ಬಳಿ ನಿಂತಿದ್ದ ಟ್ರಕ್ಗೆ ಡಿಕ್ಕಿ ಹೊಡೆದಿದೆ.
ಗಾಯಾಳುಗಳನ್ನು ಸುಹಗಿಯ ಆಸ್ಪತ್ರೆಗೆ ಸಾಗಿಸಲಾಗಿದೆ. ಗಂಭೀರ ಗಾಯಗೊಂಡವರನ್ನು ರೇವಾದ ಸಂಜಯ್ ಗಾಂಧಿ ಸ್ಮಾರಕ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಪಘಾತದಲ್ಲಿ ಮೃತಪಟ್ಟವರೆಲ್ಲಾ ಉತ್ತರಪ್ರದೇಶದ ಕಾರ್ಮಿಕರಾಗಿದ್ದು, ಅವರೆಲ್ಲಾ ಮಧ್ಯಪ್ರದೇಶದ ಕಟ್ನಿಯಲ್ಲಿ ಬಸ್ ಹತ್ತಿದ್ದರು ಎಂದು ರೇವಾ ಪೊಲೀಸ್ ವರಿಷ್ಠಾಧಿಕಾರಿ ನವನೀತ್ ಭಾಸಿನ್ ತಿಳಿಸಿದ್ದಾರೆ.
ಉತ್ತರಪ್ರದೇಶದ ಕಾರ್ಮಿಕರು ಮಧ್ಯಪ್ರದೇಶದಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು.
ಈ ನತದೃಷ್ಟರು ದೀಪಾವಳಿ ಹಬ್ಬ ಆಚರಿಸಲು ತಮ್ಮ ಊರುಗಳಿಗೆ ಹಿಂತಿರುಗುತ್ತಿದ್ದರು.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ 2 ಲಕ್ಷ ಪರಿಹಾರ ಘೋಷಿಸಿದ್ದಾರೆ. ತೀವ್ರವಾಗಿ ಗಾಯಗೊಂಡವರಿಗೆ ತಲಾ 50,000 ನೀಡಲಾಗುವುದು ಎಂದು ತಿಳಿಸಿದ್ದಾರೆ.

