ಕಳ್ಳರ ಸಾಮ್ರಾಜ್ಯದಲ್ಲಿ ನಾವೆಲ್ಲರೂ ವಾಸಿಸುತ್ತಿದ್ದೇವೆ -ಸಂತೋಷ್ ಹೆಗ್ಡೆ ವಿಷಾದ

ಬೆಂಗಳೂರು: ಹಾಲಿ ಸರ್ಕಾರದಲ್ಲಿ ಶೇ 40 ರಷ್ಟು, ಹಿಂದಿನ ಸರ್ಕಾರದಲ್ಲಿ ಶೇ 10 ಪರ್ಸೆಂಟ್ ಭ್ರಷ್ಟಾಚಾರದ ಬಗ್ಗೆ ಆರೋಪ, ಪ್ರತ್ಯಾರೋಪಗಳು ರಾಜಾರೋಷವಾಗಿ ನಡೆಯುತ್ತಿವೆ‌ ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ  ವಿಷಾದಿಸಿದರು.

ಆದರೆ ಆನೆ ಕದ್ದವನೂ ಕಳ್ಳ, ಅಡಿಕೆ ಕದ್ದವನೂ ಕಳ್ಳ. ಇಂತಹ ಕಳ್ಳರ ಸಾಮ್ರಾಜ್ಯದಲ್ಲಿ ನಾವೆಲ್ಲರೂ ವಾಸಿಸುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.

ಬೆಂಗಳೂರು ದಕ್ಷಿಣ ವಲಯ 1 ಹಾಗೂ 2ರ ಅನುದಾನರಹಿತ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟ, ಕ್ಯಾಮ್ಸ್ ಕರ್ನಾಟಕ ಏರ್ಪಡಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಮಾತನಾಡಿದರು.

ಪರಿಸ್ಥಿತಿ ಹೀಗಿರುವಾಗ ಗುತ್ತಿಗೆದಾರರು ಗುಣಮಟ್ಟದ ಕೆಲಸ ಮಾಡಲು ಸಾಧ‍್ಯವೇ ಎಂದು ಪ್ರಶ್ನಿಸಿದರು.

ಆಗಿರುವ ರಸ್ತೆ ಕಾಮಗಾರಿಗಳಲ್ಲಿ ಶೇ 70 ರಷ್ಟು ಗುಂಡಿ ಬಿದ್ದಿವೆ. ಬೆಂಗಳೂರಿನ ಚರ್ಚ್ ಸ್ಟ್ರೀಟ್ ನ ಒಂದು ಕಿಲೋಮೀಟರ್ ರಸ್ತೆಯನ್ನು 17 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾಗಿತ್ತು. ಆದರೆ ಮಳೆ ಬಂದ ನಂತರ ಈ ರಸ್ತೆಯ ಪರಿಸ್ಥಿತಿಯನ್ನು ನಾವು ಕಣ್ಣಾರೆ ನೋಡುತ್ತಿದ್ದೇವೆ ಎಂದು ಹೇಳಿದರು.

ಇತ್ತೀಚೆಗೆ ಅಂತರಾಷ್ಟ್ರೀಯ ಟ್ರಾನ್ಸ್ಪೆರೆನ್ಸಿ ಇಂಟರ್ನ್ಯಾಷನಲ್ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಭಾರತಕ್ಕಿಂತ ಚೈನಾದಲ್ಲಿ ಹೆಚ್ಚು ಭ್ರಷ್ಟಾಚಾರವಿದೆ ಎಂದು ವರದಿ ನೀಡಿದೆ.

ಚೈನಾದಲ್ಲಿ ಭ್ರಷ್ಟಾಚಾರ ಮಾಡಿದರೆ ಗಲ್ಲು ಶಿಕ್ಷೆ, ನಮ್ಮಲ್ಲಿ 7 ವರ್ಷ ಜೈಲು ಶಿಕ್ಷೆ. ಹೀಗಾಗಿ ಭ್ರಷ್ಟಾಚಾರ ದೇಶ, ಗಡಿಗಳನ್ನು ಮೀರಿದ ಪಿಡುಗು ಎಂದು ಸಂತೋಷ್ ಹೆಗ್ಡೆ ಹೇಳಿದರು.

ಭ್ರಷ್ಟಾಚಾರ ನಿರ್ಮೂಲನೆಯಾಗಬೇಕಾದರೆ ಪ್ರತಿಯೊಬ್ಬರೂ ತೃಪ್ತಿ ಎನ್ನುವ ಗುಣವನ್ನು ಮೈಗೂಡಿಸಿಕೊಳ್ಳಬೇಕು. ದೇಶ ಸಾಕಷ್ಟು ಅಭಿವೃದ್ಧಿಯಾಗಿದೆ, ಆದರೆ ಇದೇ ರೀತಿ ದುರಾಸೆಯೂ ಸಹ ಅಭಿವೃದ‍್ದಿ ಹೊಂದುತ್ತಿದೆ.

ಭ್ರಷ್ಟಾಚಾರ, ಅಕ್ರಮಗಳ ಮೂಲ ದುರಾಸೆಯಾಗಿದ್ದು, ಶಾಲಾ ಹಂತದಲ್ಲೇ ವಿದ್ಯಾರ್ಥಿಗಳಲ್ಲಿ ದುರಾಸೆಯ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸಬೇಕು ಎಂದು ಸಲಹೆ ನೀಡಿದರು.

ದುರಾಸೆಯನ್ನು ಸೃಷ್ಟಿಕರ್ತನಿಂದಲೂ ಸಹ ನಿರ್ಮೂಲನೆ ಮಾಡಲು ಸಾಧ್ಯವಿಲ್ಲ. ಹಿಂದೆ ಈ ಮಟ್ಟದ ದುರಾಸೆ ಇರಲಿಲ್ಲ.ಈಗ ಪ್ರಮಾಣಿಕತೆ ಮಾಯವಾಗಿ ದುರಾಸೆಯಂತಹ ದುರ್ಗುಣಗಳು ಮನುಷ್ಯನನ್ನು  ಆವರಿಸಿಕೊಳ್ಳುತ್ತಿವೆ ಎಂದು ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಬೇಸರ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್‌ ಸದಸ್ಯ ಪುಟ್ಟಣ್ಣ, ಸಾರ್ವಜನಿಕ ಶಿಕ್ಷಣ ಇಲಾಖೆಯ ಬೆಂಗಳೂರು ದಕ್ಷಿಣ ಜಿಲ್ಲೆಯ ಉಪನಿರ್ದೇಶಕ ಬೈಲಾಂಜನಪ್ಪ, ಕ್ಯಾಮ್, ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಚ್.ಜಿ ರಾಜಶೇಖರ ಉಪಸ್ಥಿತರಿದ್ದರು.