ಮೈಸೂರು: ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಮಕ್ಕಳ ಪೋಷಕರಿಂದ ಮಾಸಿಕ 100 ರೂ ದೇಣಿಗೆ ಪಡೆಯಲು ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿರುವುದು ನಾಚಿಕೆಗೇಡು ಎಂದು ಸ್ವಪಕ್ಷದ ಶಾಸಕ ಎಚ್.ವಿಶ್ವನಾಥ್ ಛೀಮಾರಿ ಹಾಕಿದ್ದಾರೆ.
ಮೈಸೂರು ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರಿ ಶಾಲೆಯಲ್ಲಿ ಓದುತ್ತಿರುವವರು ಬಹುತೇಕ ಬಡವರ ಮಕ್ಕಳು. ಸರ್ಕಾರ ಅವರಿಂದಲೂ ಪ್ರತಿ ತಿಂಗಳು ದುಡ್ಡು ವಸೂಲಿಗೆ ಮುಂದಾಗಿರುವುದು ದುರಂತ ಎಂದು ವಾಗ್ದಾಳಿ ನಡೆಸಿದರು.
ಬಡ ಮಕ್ಕಳ ಪೋಷಕರಿಂದ ದುಡ್ಡು ತೆಗೆದುಕೊಳ್ಳುವ ಸ್ಥಿತಿಗೆ ಸರ್ಕಾರ ತಲುಪಿದೆ ಎಂದರೆ ಅರ್ಥವೇನು,ಈ ಸರ್ಕಾರಕ್ಕೆ ದರಿದ್ರ ಬಡಿದಿದೆಯೆ ಎಂದು ಕಿಡಿಕಾರಿದರು.
ಉಚಿತ ಹಾಗೂ ಗುಣಮಟ್ಟದ ಶಿಕ್ಷಣ ಕೊಡುವುದು ಸರ್ಕಾರದ ಕರ್ತವ್ಯ. ಆದರೆ ಮರ್ಯಾದೆಯಿಲ್ಲದ ಈ ಸರ್ಕಾರ ಪೋಷಕರಿಂದಲೇ ಹಣದ ವಸೂಲಿಗೆ ಇಳಿದಿದೆ,ಈ ಸರ್ಕಾರಕ್ಕೆ ರೈಟ್ ಟು ಎಜುಕೇಶನ್ ಎಂಬುದರ ಅರ್ಥ ಗೊತ್ತಿದೆಯೇ ಎಂದು ಖಾರವಾಗಿ ಪ್ರಶ್ನಿಸಿದರು.
ತಕ್ಷಣ ಈಗ ಹೊರಡಿಸಿರುವ ಸುತ್ತೋಲೆಯನ್ನು ಹಿಂಪಡೆಯಬೇಕು ಎಂದು ವಿಶ್ವನಾಥ್ ಸರ್ಕಾರವನ್ನು ಆಗ್ರಹಿಸಿದರು.
ಇಂತಹ ವಿಷಯದಲ್ಲಿ ಮೀನಾ ಮೇಶ ಎಣಿಸುತ್ತಾ ಕೂರಬೇಡಿ.ಬಡವರು ಸಿಡಿಯುವ ಮುನ್ನ ಎಚ್ಚೆತ್ತುಕೊಳ್ಳಬೇಕು, ಈ ಆದೇಶ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ರಾಜಕೀಯ ಪಕ್ಷಗಳು, ಸಂಘಟನೆಗಳ ಇತರೆ ಸಂಸ್ಥೆಗಳು ಇದರ ವಿರುದ್ಧ ಧ್ವನಿ ಎತ್ತಬೇಕು ಎಂದು ವಿಶ್ವನಾಥ್ ಕರೆ ನೀಡಿದರು.
ನೀವು ಹೋರಾಟ ಮಾಡುವಿರಾ ಎಂಬ ಪ್ರಶ್ನೆಗೆ ಕಾದು ನೋಡೋಣ ಇವರೆಲ್ಲ ಏನು ಮಾಡುತ್ತಾರೆ.ಅನಿವಾರ್ಯ ವಾದರೆ ಹೋರಾಟ ಮಾಡಲೇಬೇಕಾಗುತ್ತದೆ ಎಂದು ತಿಳಿಸಿದರು.
ಎಚ್.ಡಿ.ಕೋಟೆಯಲ್ಲಿ ಜಿಂಕೆ ಮಾಂಸ ಸಾಗಿಸಿದ ಆರೋಪದ ಮೇಲೆ ಇಬ್ಬರನ್ನು ಅರಣ್ಯ ಇಲಾಖೆಯವರು ಬಂಧಿಸಿದ್ದು ಅದರಲ್ಲಿ ಒಬ್ಬ ಬಂಧನದಲ್ಲಿದ್ದಾಗಲೇ ಸಾವನ್ನಪಿದ್ದು ಇದರಲ್ಲಿ ಅನುಮಾನ ಕಾಡುತ್ತಿದೆ ಎಂದು ಇದೇ ವೇಳೆ ವಿಶ್ವನಾಥ್ ಆರೋಪಿಸಿದರು.
ಬಂಧನದಲ್ಲಿ ಇರುವಾಗ ಅದು ಹೇಗೆ ಆ ವ್ಯಕ್ತಿ ಮೃತಪಟ್ಟಿದ್ದಾನೆ.ಈ ಬಗ್ಗೆ ತನಿಖೆ ನಡೆಯಬೇಕು ಮತ್ತು ಆ ಭಾಗದ ಅರಣ್ಯಾಧಿಕಾರಿಗಳುತ್ತು ಸಿಬ್ಬಂದಿಯನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದರು.

