ಮೈಸೂರು: ೨೦೨೩ಕ್ಕೆ ಅಮ್ಮ, ಮಕ್ಕಳ ಪಕ್ಷ ದೆಹಲಿಗೆ ಹೋಗುತ್ತೆ, ಅಪ್ಪ- ಮಕ್ಕಳ ಪಕ್ಷ ಸಮುದ್ರಕ್ಕೆ ಬೀಳುತ್ತೆ, ಹುಲಿಯಾ ಕಾಡು ಸೇರಿದರೆ, ಬಂಡೆ ಒಡೆಯುತ್ತೆ...
ಹೀಗೆಂದು ಭವಿಷ್ಯ ನುಡಿದವರು ಯಾವುದೇ ಜ್ಯೋತಿಷಿಯಲ್ಲ,ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್!
ರಾಜ್ಯದಲ್ಲಿ ಮತ್ತೆ ಬಿಜೆಪಿ ೧೫೦ ಕ್ಷೇತ್ರ ಗೆಲುವು ಸಾಧಿಸಲಿದ್ದು ಕಮಲ ಅರಳುತ್ತದೆ ಎಂದು ಹೇಳಿದರು.
ಭಾರತೀಯ ಜನತಾ ಪಕ್ಷ ಮೈಸೂರಿನ ಭೂತಾಳೆ ಮೈದಾನದಲ್ಲಿ ಆಯೋಜಿಸಿದ್ದ ಕೃಷ್ಣರಾಜ ವಿಧಾನ ಸಭಾ ಕ್ಷೇತ್ರದ ಕಾರ್ಯಕರ್ತರ ಸಂಕಲ್ಪ ಯಾತ್ರೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದಲ್ಲೇ ಬಹಳ ಶ್ರೇಷ್ಠ ನಗರ ಮೈಸೂರು. ತಾಯಿ ಚಾಮುಂಡೇಶ್ವರಿಯನ್ನು ಪ್ರಾರ್ಥಿಸಿ 150ಸ್ಥಾನ ಗೆಲ್ಲಲ್ಲು ಶಂಖ ಊದುವ ಮೂಲಕ ಪಾಂಚಜನ್ಯ ಮೊಳಗಿಸಿದ್ದೇವೆ,ನಾವು ಗೆಲುವು ಸಾಧಿಸಿ ತೋರಿಸುತ್ತೇವೆ ಎಂದು ಹೇಳಿದರು.
ರೈಲಿಗೆ ಟಿಪ್ಪು ಹೆಸರು ತೆಗೆದು ಒಡೆಯರ ಹೆಸರಿಟ್ಟಿರುವುದು ಸ್ವಾಗತಾರ್ಹ.ಅದಕ್ಕಾಗಿ ಪ್ರಧಾನಿ ನರೇಂದ್ರಮೋದಿ ಹಾಗೂ ಸಚಿವ ಪ್ರಹ್ಲಾದ್ ಜೋಷಿಯವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಕಟೀಲ್ ತಿಳಿಸಿದರು.
ಸಿದ್ದರಾಮಯ್ಯರದ್ದು ಅನೈತಿಕ ಒಪ್ಪಂದ: 2018ರಲ್ಲಿ ಈ ರಾಜ್ಯದ ಜನ 104 ಸ್ಥಾನಗಳು ಜನತಾ ಪಾರ್ಟಿಗೆ ನೀಡಿದ ಸಂದರ್ಭದಲ್ಲೂ ಸಿದ್ದರಾಮಯ್ಯ ತಾವು ಹಗಲಿರುಳು ಬೈಯುತ್ತಿದ್ದ ಜೆಡಿಎಸ್ ಜತೆ ಒಳ ಒಪ್ಪಂದ ಮಾಡಿಕೊಂಡರು ಎಂದು ಇದೇ ವೇಳೆ ಅವರು ಟೀಕಿಸಿದರು.
ಬಳಿಕ ಕುಮಾರಸ್ವಾಮಿ ಮುಖ್ಯಮಂತ್ರಿ ಮಾಡಿದ ವೇಳೆ ಪ್ರಾರಂಭಗೊಂಡ ಅವರಿಬ್ಬರ ಒಳಜಗಳ ಕೊನೆಗೆ ಅವರನ್ನು ಕೆಳಗಿಳಿಸುವವರೆಗೂ ಬಿಡಲಿಲ್ಲ.
ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಒಂದು ದಿನವೂ ವಿಧಾನಸೌಧ ಅಥವಾ ಸಿಎಂ ನಿವಾಸದಲ್ಲಿ ಆಡಳಿತ ನಡೆಸಲೇ ಇಲ್ಲ. ಸಂಪೂರ್ಣ ತಾಜ್ ಹೋಟೆಲ್‌ನಲ್ಲಿ ನಡೆಸಿದರು ಎಂದು ಕಟೀಲ್ ವ್ಯಂಗ್ಯವಾಡಿದರು.
ಅವರ ಅವಧಿಯಲ್ಲಿ ಕಾಂಗ್ರೆಸ್ ಶಾಸಕರು, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅಷ್ಟೇ ಏಕೆ ಜೆಡಿಎಸ್ ಶಾಸಕರಿಗೂ ಕುಮಾರಸ್ವಾಮಿ ಸಿಗಲಿಲ್ಲ.
ಇದೇ ಕಾರಣಕ್ಕೆ ೧೭ ಮಂದಿ ಶಾಸಕರು ಬಿಜೆಪಿ ಬೆಂಬಲಿಸಿ ಬಂದರು.
ಈ ರಾಜ್ಯದಲ್ಲಿ ಅಭಿವೃದ್ಧಿ ಸಿದ್ದರಾಮಯ್ಯ, ಕುಮಾರಸ್ವಾಮಿಯಿಂದ ಆಗಲಿಲ್ಲ, ಬಿ.ಎಸ್.ಯಡಿಯೂರಪ್ಪ ಹಾಗೂ ಬಿಜೆಪಿಯಿಂದ ಮಾತ್ರ ಸಾಧ್ಯವಾಯಿತು.
ಅದೇ ಕಾರಣದಿಂದಾಗಿ ಬಳಿಕ ನಡೆದ ಉಪಚುನಾವಣೆಯಲ್ಲಿ ೧೭ ಕ್ಷೇತ್ರದಲ್ಲಿ ೧೫ರಲ್ಲು ನಾವು ಗೆದ್ದೆವು ಎಂದು ಹೇಳಿದರು.
ಕಾಂಗ್ರೆಸ್ ಮುಳುಗುತ್ತಿರುವ ಹಡಗು, ರಾಜ್ಯದ ವಿವಿಧ ಕಡೆಗಳಿಂದ ಬಸ್ಸುಗಳಲ್ಲಿ ಜನರನ್ನು ಕರೆತಂದು ಜೋಡೋ ಯಾತ್ರೆ ನಡೆಸಿದ್ದಾರೆ ಎಂದು ಟೀಕಿಸಿದರು.
ಇಂದು ಕರ್ನಾಟಕದ ಜನತೆಗೆ ಸಿದ್ದರಾಮಯ್ಯ ಬೇಡವಾಗಿದ್ದಾರೆ. 24 ಜನ ಹಿಂದೂ ಕಾರ್ಯಕರ್ತರ ಹತ್ಯೆಯಾಯಿತು. ಒಮ್ಮೆಯೂ ಸಿದ್ದರಾಮಯ್ಯ ಅವರಿಗೆ ಸಾಂತ್ವಾನ ಹೇಳಿ ಪರಿಹಾರ ಕೊಡುವ ಕೆಲಸ ಮಾಡಲಿಲ್ಲ ಎಂದು ನಳಿನ್ ಕುಮಾರ್ ಕಟೀಲ್ ಕಿಡಿಕಾರಿದರು.
3 ಸಾವಿರ ಮಂದಿ ರೈತರಿಗೆ ಪರಿಹಾರ ನೀಡದ ಸಿದ್ದರಾಮಯ್ಯ ಈ ರಾಜ್ಯದ ಖಳನಾಯಕ, ನರಹಂತಕ ಎಂದು ವಾಚಾಮಾಗೋಚರವಾಗಿ ವಾಗ್ದಾಳಿ ನಡೆಸಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ತೋಂಟದಾರ್ಯ, ಮಹಾಪೌರ ಶಿವಕುಮಾರ್, ಎಂಎಲ್‌ಸಿ ತುಳಸಿ ಮುನಿರಾಜುಗೌಡ, ವಿಭಾಗೀಯ ಪ್ರಭಾರಿ ಮೈ.ವಿ.ರವಿಶಂಕರ್, ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರ, ವಸ್ತುಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಹೇಮಂತ್‌ಕುಮಾರ್‌ಗೌಡ, ಉಪಮಹಾಪೌರರಾದ ರೂಪ.
ಬಿಜೆಪಿ ನಗರಾಧ್ಯಕ್ಷ ಶ್ರೀವತ್ಸ, ಕೃಷ್ಣರಾಜ ಕ್ಷೇತ್ರದ ಅಧ್ಯಕ್ಷ ವಡಿವೇಲು, ನಗರಪಾಲಿಕೆ ಸದಸ್ಯ ಬಿ.ವಿ.ಮಂಜುನಾಥ್, ಮಾ.ವಿ.ರಾಮಪ್ರಸಾದ್ ಇನ್ನಿತರರು ಈ ವೇಳೆ ಉಪಸ್ಥಿತರಿದ್ದರು.

