ಯಾವ ಪತ್ರಕರ್ತರಿಗೂ ಉಡುಗೊರೆ ಕೊಟ್ಟಿಲ್ಲ -ಸಿಎಂ ಸ್ಪಷ್ಟನೆ

ಬೆಂಗಳೂರು: ನಾನು ಯಾವುದೇ ಪತ್ರಕರ್ತರಿಗೆ ಉಡುಗೊರೆ ಅಥವಾ ಬೇರೆ ಅಮಿಷವೊಡ್ಡುವ ಕೆಲಸ ಮಾಡಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.
ಕಾಂಗ್ರೆಸ್ ಟೂಲ್‍ಕಿಟ್ ಸುಳ್ಳು ಸೃಷ್ಟಿಸುವ ಪ್ರಯತ್ನ ಮಾಡುತ್ತಿದೆ ಎಂದು ಅವರು ತಿರುಗೇಟು ನೀಡಿದರು.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಿಎಂ ಪತ್ರಕರ್ತರಿಗೆ ಯಾವುದೇ ರೀತಿಯ ಆಸೆ, ಆಮಿಷವೊಡ್ಡುವ ಕೆಲಸ ಮಾಡಿಲ್ಲ. ಅಥವಾ ನನ್ನ ಕಚೇರಿಯಿಂದಲೂ ಸೂಚನೆ ಕೊಟ್ಟಿಲ್ಲ. ಪ್ರತಿಪಕ್ಷ ಕಾಂಗ್ರೆಸ್‍ನವರು ಸುಮ್ಮನೆ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಬೇಸರ‌ ವ್ಯಕ್ತಪಡಿಸಿದರು.
ಕಾಂಗ್ರೆಸ್ ಅಧಿಕಾರದಲ್ಲಿದ್ದ ವೇಳೆ ಐಫೋನ್, ಲ್ಯಾಪ್ ಟ್ಯಾಪ್, ಬಂಗಾರದ ನಾಣ್ಯಗಳನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ. ಅವರಿಗೆ ನಮ್ಮ ಮೇಲೆ ಆರೋಪ ಮಾಡುವ ನೈತಿಕತೆ ಇಲ್ಲ ಎಂದು ಹೇಳಿದರು.
ಕಾಂಗ್ರೆಸ್ ನವರ ಕಾಲದಲ್ಲಿ ಏನೆಲ್ಲ ಗಿಫ್ಟ್ ಕೊಟ್ಟಿದ್ದಾರೆ ಎಂಬುದು ಪತ್ರಿಕೆಗಳಲ್ಲಿ ವರದಿಯಾಗಿದ್ದವು. ಐಫೋನ್, ಲ್ಯಾಪ್ ಟ್ಯಾಪ್, ಬಂಗಾರದ ಕಾಯಿನ್ ಕೊಟ್ಟಿದ್ದಾರೆ ಎಂದು ದೂರಿದರು.
ಸಿಎಂ ಪತ್ರಕರ್ತರಿಗೆ ಉಡುಗೊರೆ ಕೊಟ್ಟಿದ್ದಾರೆ ಎಂದು ಯಾರೋ ಈ ಬಗ್ಗೆ ಲೋಕಾಯುಕ್ತಕ್ಕೆ ದೂರು ಕೊಟ್ಟಿದ್ದಾರೆ. ಯಾರೂ ಕೊಟ್ಟಿದ್ದಾರೋ ಅವರಿಗೆ ಹೆಚ್ಚಿನ ಮಾಹಿತಿ ಇರಬಹುದು. ಲೋಕಾಯುಕ್ತ ಸಂಸ್ಥೆ ಒಂದು ಸ್ವಾಯತ್ತ ಸಂಸ್ಥೆಯಾಗಿರುವುದರಿಂದ ಅಗತ್ಯಬಿದ್ದರೆ ತನಿಖೆ ನಡೆಸುತ್ತಾರೆ ಎಂದು ಹೇಳಿದರು.
ಅಧಿಕಾರಿಗಳು ತನಿಖೆ ನಡೆಸುತ್ತಾರೆ ಎಂದ ಮಾತ್ರಕ್ಕೆ ಎಲ್ಲ ಪತ್ರಕರ್ತರು ಉಡುಗೊರೆ ಪಡೆದಿದ್ದಾರೆ, ಗಿಫ್ಟ್ ಕೊಟ್ಟಿದ್ದಾರೆ ಎಂಬುದು ಸರಿಯಲ್ಲ ಎಂದು ಆಕ್ಷೇಪಿಸಿದರು.
ಕಾಂಗ್ರೆಸ್‍ನ ವಕ್ತಾರರು ಬಹಳ ಕೆಟ್ಟದಾಗಿ ವ್ಯಾಖ್ಯಾನ ಮಾಡಿದ್ದಾರೆ. ಅದನ್ನು ನಾನು ಖಂಡಿಸುತ್ತೇನೆ. ಲೋಕಾಯುಕ್ತ ತನಿಖೆಯಲ್ಲಿ ಸತ್ಯಾಂಶ ಹೊರಗೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೆಆರ್‍ಪುರಂ ಪೊಲೀಸ್ ಠಾಣೆಯ ಇನ್‍ಸ್ಪೆಕ್ಟರ್ ನಂದೀಶ್ ಪ್ರಕರಣದ ಬಗ್ಗೆ ಪೊಲೀಸ್ ಮಹಾ ನಿರ್ದೇಶಕರಿಗೆ ಸೂಚನೆ ನೀಡಿ ಎಲ್ಲಾ ಮಾಹಿತಿ ಪಡೆದು ತನಿಖೆ ಕೈಗೊಳ್ಳಲಾಗುವುದು ಎಂದು ಇದೇ ವೇಳೆ ಸಿಎಂ ಹೇಳಿದರು.
ಒಬಿಸಿ ದೊಡ್ಡ ಪ್ರಮಾಣದ ಬೆಂಬಲ ಬಿಜೆಪಿಗೆ ದೊರೆಯುತ್ತಿರುವ ದ್ಯೋತಕವಾಗಿ ಈ ಕಲಬುರಗಿಯಲ್ಲಿ ಸಮಾವೇಶ ಆಯೋಜನೆಗೊಂಡಿದೆ ಎಂದು ಹೇಳಿದ ಅವರು, ನವೆಂಬರ್ ತಿಂಗಳಲ್ಲಿ ಬಳ್ಳಾರಿಯಲ್ಲಿ ಪರಿಶಿಷ್ಟ ಪಂಗಡಗಳ ಸಮಾವೇಶವಿದೆ.
ನಂತರ ಪರಿಶಿಷ್ಟ ಜಾತಿಗಳ ಸಮಾವೇಶ, ಹುಬ್ಬಳ್ಳಿಯಲ್ಲಿ ರೈತರ ಸಮಾವೇಶ ನಡೆಯಲಿದ್ದು, ಡಿಸೆಂಬರ್ ತಿಂಗಳಲ್ಲಿ ಮಹಿಳೆಯರ ಸಮಾವೇಶ ಆಯೋಜನೆ ಮಾಡಲಾಗುವುದು ಎಂದು ಬೊಮ್ಮಾಯಿ ತಿಳಿಸಿದರು.