ಬ್ಯಾಗ್ ಮುಕ್ತ ಶನಿವಾರ ಪರಿಚಯಿಸುವಂತೆ ಶಾಲೆಗಳಿಗೆ ಶಿಫಾರಸು

ಬೆಂಗಳೂರು: ಶಾಲಾ ವಿದ್ಯಾರ್ಥಿಗಳ ಭಾರವಾದ ಬ್ಯಾಗ್ ಗಳ ಕುರಿತ ಅಭಿಯಾನಗಳ ಪರಿಣಾಮ ರಾಜ್ಯ ಸರ್ಕಾರ  ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ಬ್ಯಾಗ್ ಮುಕ್ತ ಶನಿವಾರ ಪರಿಚಯಿಸುವಂತೆ ಶಾಲೆಗಳಿಗೆ ಶಿಫಾರಸು ಮಾಡಿದೆ.

ತಿಂಗಳಿಗೆ ಒಂದು ದಿನವಾದರೂ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ವಿದ್ಯಾರ್ಥಿಗಳು ತಮ್ಮ ಭಾರವಾದ ಬ್ಯಾಗ್ಗಳನ್ನು ಮನೆಯಲ್ಲಿಯೇ ಇಟ್ಟು ಬರುವಂತೆ ಸೂಚಿಸಿದೆ.

ಬ್ಯಾಗ್ ಬದಿಗಿಟ್ಟು ಮೋಜಿನ ಕಲಿಕಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು ಎಂದು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (ಡಿಎಸ್ಇಆರ್ಟಿ) ಹೇಳಿದೆ.

ಸಂಭ್ರಮ ಶನಿವಾರ ಎಂಬ ಹೆಸರಿನಡಿಯಲ್ಲಿ ತಿಂಗಳಿಗೆ ಒಂದು ಶನಿವಾರದಂದು ಬ್ಯಾಗ್ ರಹಿತ ದಿನವನ್ನು ಪರಿಚಯಿಸಲು ಶಾಲೆಗಳಿಗೆ ಇಲಾಖೆ ಶಿಫಾರಸು ಮಾಡಿದೆ.

ಕಲಿಕಾ ಚೇತರಿಕೆ ಭಾಗವಾಗಿ ಉಪಕ್ರಮವನ್ನು ಪರಿಚಯಿಸಲಾಗಿದೆ.

ಎಲ್ಲಾ ಶಾಲೆಗಳು ಪ್ರತಿ ತಿಂಗಳ ಒಂದು ಶನಿವಾರದಂದು ಸಂಭ್ರಮ ಶನಿವಾರ ಆಚರಿಸಬೇಕು. ಶಿಕ್ಷಕರು ತಮ್ಮ ವಿದ್ಯಾರ್ಥಿಗಳಲ್ಲಿ ಸಕ್ರಿಯ ಕಲಿಕೆಯನ್ನು ಉತ್ತೇಜಿಸಲು ಹತ್ತು ವಿಷಯಗಳಲ್ಲಿ ಚಟುವಟಿಕೆ ಪುಸ್ತಕಗಳನ್ನು ಬಳಸಬಹುದು ಎಂದು ಇಲಾಖೆ ತಿಳಿಸಿದೆ.

ಬ್ಯಾಗ್ ರಹಿತ ದಿನದಂದು ವಿದ್ಯಾರ್ಥಿಗಳು ಡಿಎಸ್ಇಆರ್ಟಿ ವೆಬ್ಸೈಟ್ಗೆ ಅಪ್ಲೋಡ್ ಮಾಡಿದ ಚಟುವಟಿಕೆ ಪುಸ್ತಕಗಳು ಮತ್ತು ಇತರ ವಸ್ತುಗಳನ್ನು ಬಳಸಿಕೊಳ್ಳುವಂತೆ ಡಿಎಸ್ಇಆರ್ಟಿ ಸೂಚಿಸಿದೆ.

ಕಡಿಮೆ ಸಂಖ್ಯೆಯ ಶಿಕ್ಷಕರಿರುವಾಗ ಶನಿವಾರದಂದು ಬ್ಯಾಗ್ ರಹಿತ ದಿನವಾಗಿರಬಹುದು. ಉಪಕ್ರಮವು ಕಲಿಕಾ ಕೇಂದ್ರಗಳು ಮತ್ತು ಶಾಲೆಗಳಲ್ಲಿ ಈಗಾಗಲೇ ಅಸ್ತಿತ್ವದಲ್ಲಿರುವ ಕಲಿಕೆಯ ಚೇತರಿಕೆಯ ಚಟುವಟಿಕೆಗಳಿಗೆ ಪೂರಕವಾಗಿದೆ ಎಂದು ಇಲಾಖೆ ಹೇಳಿದೆ.