ಮೈಸೂರು: ಕನಕದಾಸರು ಕನ್ನಡ ನಾಡಿನ ಬಹುದೊಡ್ಡ ಆಸ್ತಿ,ಅವರು ಜ್ಞಾನದಿಂದ ಜಾತಿ -ಮತಗಳನ್ನು ಮೀರಿ ನಿಂತವರು ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್ ತಿಳಿಸಿದರು.
ಯುವ ಭಾರತ್ ಸಂಘಟನೆ ವತಿಯಿಂದ ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನವನದಲ್ಲಿ ಏರ್ಪಡಿಸಿದ್ದ ಕನಕದಾಸರು ಹಾಗೂ ವೀರವನಿತೆ ಒನಕೆ ಓಬವ್ವ ಅವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬರೂ ಕನಕದಾಸರ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು, ಕನಕದಾಸರ ಕೀರ್ತನೆಗಳು ಕನ್ನಡದ ಅತಿ ಶ್ರೇಷ್ಠ ಕೀರ್ತನೆಗಳು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಬಣ್ಣಿಸಿದರು.
ನಗರಪಾಲಿಕೆ ಸದಸ್ಯರಾದ ಪ್ರಮೀಳಾ ಭರತ್ ಮಾತನಾಡಿ ಒನಕೆ ಓಬವ್ವಳ ಹೆಸರು ಚಿತ್ರದುರ್ಗದ ಇತಿಹಾಸದಲ್ಲಿ ಮರೆಯಲಾಗದು,ಆಕೆಯನ್ನು ಕರ್ನಾಟಕದ ವೀರವನಿತೆಯರಲ್ಲಿ ಒಬ್ಬಳೆಂದು ಪರಿಗಣಿಸಲಾಗಿದೆ ಎಂದು ಹೇಳಿದರು.
ವಿವಿಧ ಜಾತಿಯ ಗಿಡಗಳನ್ನು ನೆಟ್ಟು ಸಿಹಿ ವಿತರಿಸಿ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣ್ ಗೌಡ,ಬಿಜೆಪಿ ಹಿಂದುಳಿದ ವರ್ಗದ ಮೋರ್ಚಾ ಅಧ್ಯಕ್ಷ ಜೋಗಿ ಮಂಜು ,ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಸದಸ್ಯೆ ಲಕ್ಷ್ಮೀದೇವಿ ,ಮೃಗಾಲಯ ಪ್ರಾಧಿಕಾರ ಸದಸ್ಯಾದ ಜ್ಯೋತಿ ರೇಚಣ್ಣ ,ಸವಿತಾ ಘಾಟ್ಕೆ,ಎಸ್. ಎನ್. ರಾಜೇಶ್, ಶ್ರೀನಿವಾಸ್, ಸುಚೇಂದ್ರ, ಚಕ್ರಪಾಣಿ, ಚರಣ್, ನಾಗಶ್ರೀ, ಶರತ್ ಭಂಡಾರಿ, ಲಿಂಗರಾಜು ಮತ್ತಿತರರು ಹಾಜರಿದ್ದರು.

