ಎಲೆತೋಟದ ರಾಜಕಾಲುವೆಯಲ್ಲಿ ಮೊಸಳೆ: ಆತಂಕದಲ್ಲಿ ಸಾರ್ವಜನಿಕರು

ಮೈಸೂರು: ನಗರದ ಜೆ ಎಎಸ್‌ ಎಸ್‌ ಆಸ್ಪತ್ರೆ ಹಿಂಭಾಗದಲ್ಲಿರುವ ಎಲೆ ತೋಟದ ರಾಜಕಾಲುವೆಯಲ್ಲಿ ಪದೇ ಪದೆ ಮೊಸಳೆ ಕಾಣಿಸಿಕೊಳ್ಳುತ್ತಿರುವುದರಿಂದ ನಾಗರಿಕರಲ್ಲಿ ಆತಂಕ ಉಂಟು ಮಾಡಿದೆ.

ರಾಜಕಾಲುವೆಯಲ್ಲಿ ಭಾನುವಾರ ಕರುವೊಂದನ್ನು ಬಲಿ ತೆಗೆದುಕೊಂಡ ಜಾಗದ ಸಮೀಪದಲ್ಲಿಯೇ ಮತ್ತೊಂದು ಮೊಸಳೆ ಕಾಣಿಸಿಕೊಂಡಿದೆ.

ಭಾನುವಾರ ಕಾಣಿಸಿಕೊಂಡ ಮೊಸಳೆಗಿಂತ ಇದು ಆಕಾರದಲ್ಲಿ ಭಿನ್ನವಾಗಿದ್ದು ಮೊಸಳೆ ಬೇರೆಯದು ಎಂದು ಸಾರ್ವಜನಿಕರು ಹೇಳುತ್ತಾರೆ.

ಸೋಮವಾರ ಮಧ್ಯಾಹ್ನ ಮೊಸಳೆ ಮತ್ತೆ ಕಾಣಿಸಿಕೊಂಡಿದ್ದು, ಸ್ಥಳೀಯರು ನೋಡುತ್ತಿರುವಾಗಲೇ ಚರಂಡಿ ನೀರಿಗೆ ಹಾರಿದೆ.

ಭಾನುವಾರ ಕರುವನ್ನು ಬಲಿ ತೆಗೆದುಕೊಂಡ ಮೊಸಳೆ ಪಕ್ಕದ ಕೆರೆಯಲ್ಲಿತ್ತು. ಬಗ್ಗೆ ಸ್ಥಳೀಯರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದರು.

ಆರ್ಎಫ್ ಸುರೇಂದ್ರ, ಡಿ ಆರ್ಎಫ್ ವೆಂಕಟಾಚಲ ಹಾಗೂ ಸಿಬ್ಬಂದಿ ಸೇರಿ ಒಟ್ಟು 6 ಜನ  ಮೊಸಳೆಯನ್ನು ಹಿಡಿಯುವ ಕಾರ್ಯಾಚರಣೆ ಆರಂಭಿಸಿದ್ದರು.

ಮೋಟಾರ್ ಬಳಸಿ ಕೆರೆಯ ನೀರನ್ನು ಹೊರಚೆಲ್ಲಿ ಮೊಸಳೆಯನ್ನು ಹಿಡಿಯುವ ಪ್ರಯತ್ನ ಮಾಡಲಾಗಿತ್ತು.

ಆದರೆ ನೀರನ್ನು ಖಾಲಿ ಮಾಡುವಷ್ಟರಲ್ಲಿ ಸಂಜೆಯಾಗಿ ಕತ್ತಲಾವರಿಸಿತ್ತು.ಹಾಗಾಗಿ ಕಾರ್ಯಾಚರಣೆ ಕೈ ಬಿಟ್ಟ ಅಧಿಕಾರಿಗಳು ಬರಿಗೈಯಲ್ಲಿ ತೆರಳಿದ್ದರು.

ಸೋಮವಾರ ಕೆರೆಗೆ ಸಮೀಪದಲ್ಲಿಯೇ ಚರಂಡಿ ನೀರಿನಿಂದ ಮೇಲೆ ಬಂದ ಮೊಸಳೆ ಬಹು ಹೊತ್ತಿನವೆರೆಗೂ ಮುರಿದು ಬಿದ್ದ ತೆಂಗಿನ ಮರವೊಂದರ ಮೇಲೆ ಮಲಗಿತ್ತು.

ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡುವಷ್ಟರಲ್ಲಿ ಮೊಸಳೆ ಮತ್ತೆ ಚರಂಡಿ ನೀರು ಸೇರಿಕೊಂಡಿತ್ತು.

ಎಲೆತೋಟದಲ್ಲಿ ಒಂದಕ್ಕಿಂತ ಹೆಚ್ಚು ಮೊಸಳೆಗಳಿವೆ. ನಾವು ಹಲವು ಬಾರಿ ಮೊಸಳೆಗಳನ್ನು ನೋಡಿದ್ದೇವೆ ಎಂದು ರಾಮಾನುಜ ರಸ್ತೆ ನಿವಾಸಿ ಮಧುಕರ್ ಹಾಗೂ ಎಲೆ ತೋಟದಲ್ಲಿಅಡಿಕೆ ತೋಟ ಹೊಂದಿರುವ ಮರಿಸ್ವಾಮಿ ಮತ್ತು ಚಾಮರಾಜು ನಿವಾಸಿ ತಿಳಿಸಿ ಮಾಧ್ಯಮದ ವರಿಗೆ ತಿಳಿಸಿದರು.

ಕಳೆದ ಒಂದು ತಿಂಗಳಲ್ಲಿ ಹಲವು ಬಾರಿ ಮೊಸಳೆ ಕಾಣಿಸಿಕೊಂಡಿದ್ದು ಸ್ಥಳೀಯರು ಆತಂಕಕ್ಕೆ ಒಳಗಾಗುವಂತೆ ಮಾಡಿದೆ.

ಇಲ್ಲಿನ ಅಡಿಕೆ ತೋಟದ ಮಧ್ಯೆ ವೀಳ್ಯದೆಲೆ ಬೆಳೆಯುವ ಜನರು ಈಗ ತೋಟಕ್ಕೆ ಹೋಗಲು ಹೆದರುತ್ತಿದ್ದಾರೆ.

ಮೊಸಳೆ ಆಗಾಗ ಇಲ್ಲಿನ ಸಣ್ಣ ಸೇತುವೆ ಮೇಲೆ ಬಂದು ಮಲಗಿರುತ್ತದೆ, ಮನುಷ್ಯರ ಹೆಜ್ಜೆ ಸಪ್ಪಳವಾದ ತಕ್ಷಣ ಚರಂಡಿಗೆ ಹಾರಿ ಮಾಯವಾಗುತ್ತದೆ ಎಂದು ಅವರು ತಿಳಿಸಿದರು.

ನಾವು ನೋಡಿದ ಮೊಸಳೆಗಳಲ್ಲಿ ಒಂದು ಆರಡಿ ಉದ್ದವಿದ್ದು, ಇನ್ನೊಂದು ಇದಕ್ಕಿಂತ ಚಿಕ್ಕದು ಎಂದು ಅವರು ವಿವರಿಸಿದರು.

ಎಲೆತೋಟದ ಬಳಿ ಅಡಿಕೆ ತೋಟದ ಮಧ್ಯೆಯೇ ಚರಂಡಿ ನೀರು ಹಾದುಹೋಗುತ್ತಿದ್ದು ಅಕ್ಕಪಕ್ಕ ಪೊದೆಗಳು ಬೆಳೆದು ನಿಂತಿರುವುದರಿಂದ ಮೊಸಳೆಗೆ ಇದು ಸುರಕ್ಷಿತ ತಾಣವಾಗಿದೆ.

ಎಲೆ ತೋಟ ನಿವಾಸಿಗಳು ಮತ್ತು ರಾಮಾನುಜ ರಸ್ತೆ ನಿವಾಸಿಗಳ ಹಸುಕರುಗಳು ಇದೇ ತೋಟಕ್ಕೆ ಮೇಯಲು ಹೋಗುತ್ತವೆ.

ಒಂದು ಬಾರಿ ಕರುವಿನ ರಕ್ತದ ರುಚಿ ನೋಡಿರುವ ಮೊಸಳೆ ಮತ್ತೆ ಇದೇ ಭಾಗದಲ್ಲಿ ಸುಳಿದಾಡುತ್ತದೆ ಎಂದು ಸ್ಥಳೀಯ ನಿವಾಸಿ ಮಲ್ಲೇಶ್ ತಿಳಿಸಿದರು.

ಎಲೆತೋಟ, ಸೀವೇಜ್ ಫಾರಂ ಸಮೀಪ ಕಳೆದ ಮೂರು ವರ್ಷಗಳಿಂದ ಮೊಸಳೆ ಕಾಣಿಸಿಕೊಳ್ಳುತ್ತಿದೆ.

ಅದರಲ್ಲೂ ಅಕ್ಟೋಬರ್, ನವೆಂಬರ್ ತಿಂಗಳಲ್ಲಿಯೇ ಕಾಣಿಸಿಕೊಂಡಿರುವುದು ವಿಶೇಷ.

ಜಿಎಲ್ ಬಿ ರಸ್ತೆಯ ಚಾಮುಂಡಿಪುರಂ ಸಮೀಪದ ರಾಜಕಾಲುವೆಯಲ್ಲಿ ಅಕ್ಟೋಬರ್ 15ರಂದು ಮೊದಲ ಬಾರಿಗೆ ಮೊಸಳೆ ಕಾಣಿಸಿಕೊಂಡಿತ್ತು.

ಮೂರ್ನಾಲ್ಕು ಗಂಟೆಗಳ ತನಕ ಮೊಸಳೆ ಇಲ್ಲಿಯೇ ಇತ್ತು. ಆದರೆ ಅರಣ್ಯ ಇಲಾಖೆ ಸಿಬ್ಬಂದಿ ಬರುವಷ್ಟರಲ್ಲಿ ಅದು ಪೊದೆಗಳ ಮಧ್ಯೆ ಮರೆಯಾಗಿತ್ತು.

ಅಕ್ಟೋಬರ್ 29 ರಂದು ಎಲೆತೋಟದ ಕಿರು ಸೇತುವೆ ಮೇಲೆ ವಿಶ್ರಾಂತಿ ಪಡೆಯುತ್ತಿದ್ದ ಮೊಸಳೆ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.

2020 ಮತ್ತು 2021ರಲ್ಲೂ ನವೆಂಬರ್ ತಿಂಗಳಲ್ಲಿ ಸೀವೇಜ್ ಫಾರಂ ತ್ಯಾಜ್ಯ ವಿಲೇವಾರಿ ಘಟಕದ ಸಮೀಪ ಮೊಸಳೆ ಪತ್ತೆಯಾಗಿತ್ತು.

ಈಗಲಾದರೂ ಅರಣ್ಯ ಇಲಾಖೆಯವರು ಮೊಸಳೆಯನ್ನು ಹಿಡಿದು ಸಾರ್ವಜನಿಕರಿಗೆ ನೆಮ್ಮದಿ ನೀಡಲಿ.