ವಂಶವಾಹಿನಿ ಕಾಯಿಲೆ ತಡೆಗೆ ಸಂಶೋಧನೆ ಅಗತ್ಯ -ಡಾ. ವೈ. ಎಂ. ಶಿವಕುಮಾರ್

ಮೈಸೂರು: ರಕ್ತವನ್ನು ಉತ್ಪಾದಿಸಲು ಸಾಧ್ಯವಿಲ್ಲದ ಕಾರಣ, ದಾನಿಗಳಿಂದಷ್ಟೆ  ಪಡೆಯಬಹುದು,ಹಾಗಾಗಿ ರಕ್ತದಾನದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಹೆಚ್ಚಾಗಬೇಕು ಎಂದು ಮೈಸೂರು ವೈದ್ಯಕೀಯ ಸಂಘದ ಅಧ್ಯಕ್ಷರಾದ ಡಾ. ವೈ. ಎಂ. ಶಿವಕುಮಾರ್ ತಿಳಿಸಿದರು.

ನಗರದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಜೀವದಾರ ರಕ್ತ ನಿಧಿ ಕೇಂದ್ರದ ವತಿಯಿಂದ ಸ್ವಯಂ ಪ್ರೇರಿತ ರಕ್ತದಾನ ಮಾಡುವ ರಕ್ತದಾನಿಗಳಿಗೆ ಉಚಿತ ವಾಹನ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

ರಕ್ತವನ್ನು ವಿವಿಧ ಭಾಗಗಳಾಗಿ ಬೇರ್ಪಡಿಸಿ ನಿರ್ದಿಷ್ಟ ಬೇಡಿಕೆಗೆ ಅನುಗುಣವಾಗಿ ಬಳಕೆ ಮಾಡಿಕೊಳ್ಳುವ ತಂತ್ರಜ್ಞಾನ ಚಾಲ್ತಿಯಲ್ಲಿದೆ. ಆದರೆ ರಕ್ತವನ್ನು ದೀರ್ಘ ಕಾಲದವರೆಗೂ ಸಂರಕ್ಷಿಸಿಡಲು ಸಾಧ್ಯವಿಲ್ಲ. ಹೆಚ್ಚೆಂದರೆ ರಕ್ತವನ್ನು 32 ದಿನ, ಪೇಟ್ಲೆಟ್‌ಗಳನ್ನು ವಾರದವರೆಗೂ ಇಡಬಹುದು ಈ ನಿಟ್ಟಿನಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಸಂಶೋಧನೆಗಳು ನಡೆಯಬೇಕಿದೆ ಎಂದು ಸಲಹೆ ನೀಡಿದರು.

ವಂಶವಾಹಿನಿಗಳ ಮೂಲಕ ಬರುವ ಕಾಯಿಲೆಗಳನ್ನು ತಡೆಯುವುದು ಕಷ್ವ ವೈದ್ಯರು ಇಂತಹ ಸವಾಲುಗಳನ್ನು ಸ್ವೀಕರಿಸಬೇಕು,ರಾಷ್ಟ್ರೀಯ ಮಟ್ಟದಲ್ಲಿ ಪ್ರಬಂಧ ಮಂಡನೆ ಹಾಗೂ ಸಂಶೋಧನೆಗಳು ನಡೆಯಬೇಕು ಎಂದು ಹೇಳಿದರು.

ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್ ಮಾತನಾಡಿ ರಕ್ತದಾನಿಗಳಿಗೆ ಇನ್ನೂ ಅನುಕೂಲವಾಗುವ ನಿಟ್ಟಿನಲ್ಲಿ

ಮುಂದಿನ ದಿನಗಳಲ್ಲಿ ಸಂಚಾರಿ ರಕ್ತ ನಿಧಿ ವಾಹನವನ್ನು ಲೋಕಾರ್ಪಣೆ ಮಾಡುವ ಚಿಂತನೆಯಲ್ಲಿದ್ದೇವೆ ಎಂದು ತಿಳಿಸಿದರು.

ಸ್ವಯಂ ಪ್ರೇರಿತ ರಕ್ತದಾನ ಮಾಡಲು ವಾಹನದ ವ್ಯವಸ್ಥೆ ಬೇಕಾದಲ್ಲಿ  9008123101 ಈ ದೂರವಾಣಿಗೆ ಸಂಪರ್ಕಿಸಬಹುದು ಎಂದು ಹೇಳಿದರು.

ಸ್ತ್ರೀ ಮತ್ತು ಪ್ರಸೂತಿ ಸಂಘದ ಅಧ್ಯಕ್ಷರೂ ಖ್ಯಾತ ವೈದ್ಯರಾದ ರೂಪಪ್ರಕಾಶ್ ಮಾತನಾಡಿ, ರಕ್ತಕ್ಕೆ ಬದಲಿ ವಸ್ತುಗಳು ಇಲ್ಲ ಹಾಗಾಗಿ ವಿಶೇಷ ಮಹತ್ವವಿದೆ. ಯುವಕರು ರಕ್ತದಾನದ ಸಂಕಲ್ಪ ತೊಡಬೇಕು ಎಂದು ಸಲಹೆ ನೀಡಿದರು.

ಮುತ್ತಣ್ಣ, ರಶ್ಮಿ, ಮಮತಾ, ಸದಾಶಿವ್ ,ಚಂದ್ರು, ಶಾರದಾ, ಪ್ರಭು,ಬ್ಲಡ್ ಆನ್ ಕಾಲ್ ಕ್ಲಬ್ ದೇವೇಂದ್ರ ಪರಿಹಾರಿಯ , ಆನಂದ್ ಮಂಡೂತ್, ಅನ್ಮೋಲ್  ಮತ್ತಿತರರು ಹಾಜರಿದ್ದರು.