ರಾಜಕೀಯ ವಿರೋಧಿಗಳ ಹೆದರಿಸಲು ಕೇಂದ್ರ  ಸರ್ಕಾರದಿಂದ ಸಿಬಿಐ ಬಳಕೆ; ಹರಿಪ್ರಸಾದ್ ವಾಗ್ದಾಳಿ

ಬೆಳಗಾವಿ: ರಾಜಕೀಯ ವಿರೋಧಿಗಳನ್ನು ಹೆದರಿಸಲು ಕೇಂದ್ರ ಸರ್ಕಾರ ಸಿಬಿಐ ಬಳಸಿಕೊಂಡು ದಾಳಿ ನಡೆಸುತ್ತಿದೆ. ಇದಕ್ಕೆ ನಾವು ಹೆದರುವುದಿಲ್ಲ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಮಾದ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದ ಅವರು , ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜನ ವಿರೋಧಿ ನಿಲುವುಗಳ ವಿರುದ್ಧ ಹೋರಾಟ ಮುಂದುವರೆಯಲಿದೆ ಎಂದು ತಿಳಿಸಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರ ಒಡೆತನದ ಶಿಕ್ಷಣ ಸಂಸ್ಥೆಗಳ ಮೇಲೆ ಸಿಬಿಐ ದಾಳಿ ನಡೆದಿರುವ ಕುರಿತು ಪ್ರತಿಕ್ರಿಯಿಸಿ, ಸಿಬಿಐ ಬಿಜೆಪಿಯ ಮುಂಚೂಣಿ ಘಟಕವಾಗಿದೆ. ಇಡಿ ಅಂದರೆ ಎಲೆಕ್ಷನ್ ಡಿಪಾಟ್ರ್ಮೆಂಟ್ ಇದ್ದಂತೆ, ಐಟಿ ಅಂದರೆ ಬಿಜೆಪಿಯ ಇಂಜಲಿಜೆಂಟ್ ಡಿಪಾರ್ಟ್‍ಮೆಂಟ್ ಎಂದು ವಾಗ್ದಾಳಿ ನಡೆಸಿದರು.

ಕೇಂದ್ರ ಸರ್ಕಾರ ಸಿಬಿಐ  ಬಳಸಿಕೊಂಡು ಬಿಜೆಪಿ ವಿರೋಧಿಗಳ ಬಾಯಿ ಮುಚ್ಚಿಸುವ ಯತ್ನ ಮಾಡುತ್ತಿದೆ. ನಾವು ಅದಕ್ಕೆ ಹೆದರುವುದಿಲ್ಲ ಎಂದು ಹೇಳಿದರು.

ಸಾವರ್ಕರ್ ಆರು ಬಾರಿ ಕ್ಷಮಾಪಣೆ ಪತ್ರ ಬರೆದವರು,  ದೇಶದ ಸ್ವತಂತ್ರ್ಯ ಹೋರಾಟದ ವಿರುದ್ಧ ಇದ್ದವರು. ಅಂತಹವರ ಫೋಟೊ ತಂದು ವಿಧಾನಸಭೆ ಸಭಾಂಗಣದಲ್ಲಿ ಹಾಕಲಾಗಿದೆ. ಬಿಜೆಪಿ ಪ್ರಜಾಪ್ರಭುತ್ವ, ಮತ್ತು ಸಂವಿಧಾನವನ್ನು ಬುಡಮೇಲು ಮಾಡುತ್ತಿದೆ ಎಂದು ಆರೋಪಿಸಿದರು.

ಸಾರ್ವರ್ಕರ್ ವಿಚಾರದಲ್ಲಿ ಪಕ್ಷದಲ್ಲಿ ಎಲ್ಲರದೂ ಒಂದೇ ಅಭಿಪ್ರಾಯ. ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರ ನಡುವೆ ಧ್ವಂಧ್ವಗಳಿಲ್ಲ. ಇಬ್ಬರ ಹೇಳಿಕೆಗಳು ಸರಿಯಾಗಿ ಇವೆ. ನಮ್ಮಲ್ಲಿ ಯಾವುದೇ ಗೊಂದಲವಿಲ್ಲ ಎಂದು ಬಿ.ಕೆ.ಹರಿಪ್ರಸಾದ್ ಸ್ಪಷ್ಟ ಪಡಿಸಿದರು.

ವಿಧಾನಸಭೆ ಚುನಾವಣೆಯ ಅಭ್ಯರ್ಥಿಗಳ ಆಯ್ಕೆ ವಿಷಯದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ತೀರ್ಮಾನವೇ ಅಂತಿಮ. ಅದಕ್ಕೂ ಮೊದಲು ಯಾರಿಗೂ ಅಭ್ಯರ್ಥಿಗಳನ್ನು ಘೋಷಣೆ ಮಾಡಲು ಅವಕಾಶವಿಲ್ಲ ಎಂದು ಹೇಳಿದರು.