ಜನರಿಗೆ ಬಿಜೆಪಿ ಮಾಡಿರುವಷ್ಟು ಅನ್ಯಾಯ ಯಾವ ಕಾಲದಲ್ಲೂ ಆಗಿರಲಿಲ್ಲ; ಡಿಕೆಶಿ ಕಿಡಿ

ವಿಜಯಪುರ: ರಾಜ್ಯದ ಜನರಿಗೆ ಬಿಜೆಪಿ ಮಾಡಿರುವಷ್ಟು ಅನ್ಯಾಯ ಯಾವ ಕಾಲದಲ್ಲೂ ಆಗಿರಲಿಲ್ಲ. ಹಾಗಾಗಿ ಆಕ್ರೋಶಗೊಂಡ ಅಪಾರ ಜನ ನಮ್ಮ ಪ್ರತಿಭಟನಾ ಸಮಾವೇಶಕ್ಕೆ ಸೇರಿದ್ದರು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದರು.

ವಿಜಯಪುರ ದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

ಅಮಿತ್ ಶಾ ರಾಜ್ಯ ಪ್ರವಾಸ ಹಾಗೂ ಯೋಜನೆ ಘೋಷಣೆ ಚುನಾವಣೆ ಮೇಲೆ ಪ್ರಭಾವ ಬೀರುತ್ತದೆಯೇ ಎಂಬ ಪ್ರಶ್ನಿಗೆ  ಅಧಿಕಾರ ಇದ್ದಾಗ ಕೆಲಸ ಮಾಡದವರು ಅಧಿಕಾರ ಹೋಗುವ ಸಮಯದಲ್ಲಿ ಯೋಜನೆ ಘೋಷಣೆ ಮಾಡಿದರೆ ಏನು ಪ್ರಯೋಜನ ಎಂದು ಪ್ರತಿಕ್ರಿಯಿಸಿದರು.

ಉಳಿದಿರುವ 100 ದಿನಗಳಲ್ಲಿ ಯಾವ ಯೋಜನೆ ಜಾರಿ ಆಗುತ್ತದೆ ಇದು ಕೇವಲ ಕಾಗದದ ಮೇಲೆ ಉಳಿಯುವ ಯೋಜನೆ ಅಷ್ಟೇ ಎಂದು ಹೇಳಿದರು.

ಕಳೆದ ಚುನಾವಣೆಯಲ್ಲಿ ನೀಡಿದ್ದ 600 ಭರವಸೆಗಳಲ್ಲಿ 550 ಅನ್ನು ಜಾರಿ ಮಾಡಿಲ್ಲ. ನಮ್ಮ ಪಕ್ಷ ಕೊಟ್ಟಿದ್ದ 169 ಯೋಜನೆಗಳ ಪೈಕಿ 168 ಯೋಜನೆಗಳನ್ನು ಜಾರಿ ಮಾಡಿದ್ದೇವೆ’ ಎಂದು ತಿಳಿಸಿದರು.

ಮೀಸಲಾತಿ ವಿಚಾರವಾಗಿ ರಾಜ್ಯ ಸರ್ಕಾರದ ನಡೆ ಬಗ್ಗೆ ಕೇಳಿದಾಗ, ಅವರು ನಮ್ಮನ್ನು ಶಾಲಾ ಮಕ್ಕಳೆಂದು ಭಾವಿಸಿದ್ದಾರೆ ಎಂದು ಟೀಕಿಸಿದರು.

ಅವರ ಕ್ರಮದಿಂದ ಯಾರಿಗೆ ಅನುಕೂಲ, ಇರುವ ಮೀಸಲಾತಿ ತೆಗೆದುಹಾಕಲು ಹೇಗೆ ಸಾಧ್ಯ, ಇದು ಅಸಾಧ್ಯ.

ಶೇ.10 ರಷ್ಟು ಮೀಸಲಾತಿ ತೆಗೆದರೆ ಅವರ ಭವಿಷ್ಯ ಏನಾಗಬೇಕು ಯಾವುದೇ ಕ್ರಮವನ್ನು ಸಂವಿಧಾನ ಬದ್ಧ, ಕಾನೂನು ಬದ್ಧವಾಗಿ ತೆಗೆದುಕೊಳ್ಳಬೇಕು.

ಈ ಕ್ರಮದಿಂದ ಪಂಚಮಸಾಲಿ ಹಾಗೂ ಒಕ್ಕಲಿಗರಿಗೆ ನ್ಯಾಯ ಸಿಗುತ್ತದೆ ಎಂದು ಬಿಜೆಪಿ ನಾಯಕರನ್ನು ಬಿಟ್ಟು ಆಯಾ ಸಮುದಾಯದ ಮುಖಂಡರಿಂದ ಹೇಳಿಕೆ ಕೊಡಿಸಲಿ ಎಂದು ಸವಾಲು ಹಾಕಿದರು.

ಒಕ್ಕಲಿಗರು ಶೇ.12 ರಷ್ಟು ಮೀಸಲಾತಿ ಕೇಳಿದ್ದು ಅದನ್ನು ಘೋಷಣೆ ಮಾಡಲಿ. ಪಂಚಮಸಾಲಿ ಸಮಾಜ ಆಗ್ರಹಿಸಿರುವ ಬೇಡಿಕೆ ಘೋಷಿಸಲಿ.

ಪರಿಶಿಷ್ಟರಿಗೆ ನೀಡಲಾಗಿರುವ ಮೀಸಲಾತಿ ಹೆಚ್ಚಳವನ್ನು ಸಂವಿಧಾನದ 9ನೇ ಶೆಡ್ಯೂಲ್ ನಲ್ಲಿ ಸೇರಿಸಬೇಕಿತ್ತು. ಇದುವರೆಗೂ  ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆಯೇ ಹೋಗಿಲ್ಲ ಎಂದು ಡಿಕೆಶಿ ಗುಡುಗಿದರು.

ಇಲ್ಲಿ ಕೇವಲ ಆದೇಶ ಮಾಡಿದರೆ ಆಗುತ್ತದೆಯೇ ಎಲ್ಲದಕ್ಕೂ ಕಾನೂನು ತೊಡಕು ಇದೆ. ಯಾರ ವಿರೋಧವನ್ನೂ ಕಟ್ಟಿಕೊಳ್ಳಬಾರದು ಎಂದು ಆಡುತ್ತಿರುವ ನಾಟಕ ಇದು ಎಂದು ಚಾಟಿ ಬೀಸಿದರು.