ಶಾಸಕ ಅರವಿಂದ ಲಿಂಬಾವಳಿ ವಿರುದ್ಧ ಎಫ್ಐಆರ್

ಬೆಂಗಳೂರು: ತಲೆಗೆ‌ ಗುಂಡು ಹಾರಿಸಿಕೊಂಡು ಪ್ರದೀಪ್ ಎಂಬ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಸೇರಿ 6 ಮಂದಿ ವಿರುದ್ಧ ಎಫ್​​ಐಆರ್ ದಾಖಲಾಗಿದೆ.

ಅರವಿಂದ ಲಿಂಬಾವಳಿ ಸೇರಿದಂತೆ ಆರು ಜನರ ವಿರುದ್ಧ ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆಗೆ ಪ್ರಚೋದನೆ ನೀಡಲಾಗಿದೆ ಎಂದು ಎಫ್​ಐಆರ್ ದಾಖಲಾಗಿದೆ.

ಉದ್ಯಮಿ ಪ್ರದೀಪ್ ಪತ್ನಿ ನೀಡಿದ ದೂರಿನನ್ವಯ ಪೊಲೀಸರು ಎಫ್​ಐಆರ್​​ ದಾಖಲಿಸಿದ್ದಾರೆ.

ಡೆತ್‌ನೋಟ್‌ನಲ್ಲಿ ಅರವಿಂದ ಲಿಂಬಾವಳಿ, ಜಿ.ರಮೇಶ್‌ ರೆಡ್ಡಿ, ಕೆ.ಗೋಪಿ‌, ಜಯರಾಮ್ ರೆಡ್ಡಿ, ರಾಘವ ಭಟ್, ಸೋಮಯ್ಯ ಅವರುಗಳ ಹೆಸರು ಉಲ್ಲೇಖವಾಗಿದೆ.

ಪ್ರಕರಣ ಸಂಬಂಧ ತನಿಖೆ ಚುರುಕುಗೊಳಿಸಿರುವ ಪೊಲೀಸರು, ಆತ್ಮಹತ್ಯೆಗೆ ಶರಣಾದ ಪ್ರದೀಪ್​​ ಕೊನೆ ಬಾರಿಗೆ ಕರೆ ಮಾಡಿದ್ದು ಯಾರಿಗೆ,ಪ್ರದೀಪ್​ ಜತೆಗೆ ಯಾರು ಯಾರಿಗೆ ಸಂಬಂಧ ಇದೆ ಎಂಬ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಮೃತ ಪ್ರದೀಪ್​​ ಯಾರೊಂದಿಗೆ ವ್ಯವಹಾರ ಮಾಡಿದ್ದರು, ಆತ್ಮಹತ್ಯೆ​ ಮಾಡಿಕೊಳ್ಳುವಾಗ ಬಳಸಿದ ಗನ್​ ಯಾರದ್ದು ಮತ್ತಿತರ ವಿಚಾರಗಳ ಕುರಿತು ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ಮೃತ ವ್ಯಕ್ತಿಯು ಮೈಸೂರು ನಿವಾಸಿಯಾಗಿದ್ದು, ಈತ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಡೆತ್ ನೋಟ್ ಬರೆದಿಟ್ಟು ಕಾರಿನಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ.