ಸಿದ್ದೇಶ್ವರ ಸ್ವಾಮೀಜಿಗಳ ಅಂತಿಮ ದರ್ಶನಕ್ಕೆ ಹರಿದು ಬಂದ ಭಕ್ತ ಸಾಗರ

ವಿಜಯಪುರ: ಲಿಂಗೈಕ್ಯರಾದ  ಜ್ಞಾನಯೋಗಾಶ್ರಮದ ಪರಮಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಅಂತಿಮ ದರ್ಶನಕ್ಕೆ ಸೈನಿಕ ಶಾಲೆಯಲ್ಲಿ ವ್ಯವಸ್ಥೆ ಮಾಡಲಾಗಿದೆ.

ಪಾಂಡಿತ್ಯಪೂರ್ಣ ತತ್ವಜ್ಞಾನಿಯ ಅಂತಮ ದರ್ಶನ ಪಡೆಯಲು ಸಾಗರೋಪಾದಿಯಲ್ಲಿ ಜನತೆ ಹರಿದು ಬರುತ್ತಿದೆ

ಗಣ್ಯರು, ಸಾರ್ವಜನಿಕರ ಅಂತಿಮ ದರ್ಶನಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ವಿವಿಧ ಮಠಾಧೀಶರು, ರಾಜ್ಯ ಮತ್ತು ಕೇಂದ್ರ ಸರಕಾರದ ಸಚಿವರು, ಶಾಸಕರು ಸೇರಿದಂತೆ ಅಪಾರ ಭಕ್ತ ಸಮೂಹ  ಪಾಲ್ಗೊಳ್ಳಲಿದೆ.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಮಾತನಾಡಿ, ಶ್ರೀಗಳ ಅಂತಿಮ ಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲು ಸರ್ಕಾರ ನಿರ್ದೇಶಿಸಿದೆ ಎಂದು ತಿಳಿಸಿದರು.

ಸಂಜೆ 4.00 ಗಂಟೆಗೆ ತೆರೆದ ವಾಹನದಲ್ಲಿ ಪಾರ್ಥಿವ ಶರೀರವನ್ನು ಸೈನಿಕ ಶಾಲೆಯಿಂದ ಜ್ಞಾನಯೋಗಾಶ್ರಮಕ್ಕೆ ತರಲಾಗುವುದು.

ಅಂತಿಮ ಕ್ರಿಯೆಯನ್ನು ಸಂಜೆ 5 ಗಂಟೆಗೆ ಆಶ್ರಮದ ಆವರಣದಲ್ಲಿ ವಿಧಿವಿಧಾನಗಳಂತೆ ನೇರವೇರಿಸಲಾಗುತ್ತದೆ.

ಆಶ್ರಮದ ಆವರಣದಲ್ಲಿ ಸ್ಥಳಾವಕಾಶದ ಅಭಾವವಿದ್ದು ಭಕ್ತಾದಿಗಳು ಸೈನಿಕ ಶಾಲೆಯಲ್ಲಿಯೇ ಅಂತಿಮ ದರ್ಶನ ಪಡೆಯಬೇಕು. ಯಾವುದೇ ಆತಂತಕ್ಕೆ ಒಳಗಾಗದೇ ಶಾಂತ ರೀತಿಯಿಂದ ವರ್ತಿಸಿ, ಜಿಲ್ಲಾಡಳಿತದೊಂದಿಗೆ ಸಹಕರಿಸುವಂತೆ ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.

82 ವರ್ಷದ ಪಾಂಡಿತ್ಯಪೂರ್ಣ ತತ್ವಜ್ಞಾನಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ಕಳೆದ ಕೆಲದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದರು.

ಆಸ್ಪತ್ರೆಗೆ ಸೇರಲಿಚ್ಚಿಸದ ಅವರಿಗೆ ಜ್ಞಾನಯೋಗಾಶ್ರಮದಲ್ಲೇ ಚಿಕಿತ್ಸೆ ನೀಡಲಾಗುತ್ತಿತ್ತು.

ತಜ್ಞ ವೈದ್ಯರ ತಂಡ ಶ್ರೀಗಳಿಗೆ ಚಿಕಿತ್ಸೆ ನೀಡುತ್ತಿತ್ತು. ಆದರೆ, ವೈಕುಂಠ ಏಕಾದಶಿಯ ಪುಣ್ಯ ದಿನದಂದು ಸಂಜೆ ಚಿಕಿತ್ಸೆ ಫಲಕಾರಿಯಾಗದೆ ಸಿದ್ದೇಶ್ವರ ಶ್ರೀಗಳು ಇಹಲೋಕ ತ್ಯಜಿಸಿದರು.