ಬೆಂಗಳೂರು: ಉದ್ಯಮಿ ಪ್ರದೀಪ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಅರವಿಂದ ಲಿಂಬಾವಳಿಯನ್ನ ಬಂಧಿಸುವಂತೆ ಮಾಜಿ ಸಿಎಂ ಸಿದ್ಧರಾಮಯ್ಯ ಆಗ್ರಹಿಸಿದ್ದಾರೆ.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಿದ್ದು,ಹಣಕಾಸಿನ ವ್ಯವಹಾರದಲ್ಲಿ ಇಂತಹ ಘಟನೆ ನಡೆದಿದೆ. ಪ್ರದೀಪ್ ಪತ್ನಿ ನ್ಯಾಯ ಕೊಡಿಸುವಂತೆ ಮನವಿ ಮಾಡಿದರು.
1.5ಕೋಟಿ ಬಂಡವಾಳ ಹಾಕಿ ಒಂದು ಪೈಸೆ ಲಾಭ ಬಂದಿಲ್ಲ ಎಂದಿದ್ದಾರೆ. ನಮ್ಮ ಹಣ ವಾಪಸ್ ಕೊಡಿಸಿ ಎಂದು ಅಳಲು ತೋಡಿಕೊಂಡಿದ್ದಾರೆ.
ಈ ಭಾಗದ ಶಾಸಕ ಲಿಂಬಾವಳಿ ಒಪ್ಪಂದ ಮಾಡಿಸಿದ್ದರು, ಆತ್ಮಹತ್ಯೆ ಪ್ರಕರಣದಲ್ಲಿ ಲಿಂಬಾವಳಿ ಸೇರಿ 6 ಜನರ ಹೆಸರು ಕೇಳಿ ಬಂದಿದೆ. ಪೊಲೀಸರು ಹಣವನ್ನ ವಾಪಸ್ ಕೊಡಿಸಬೇಕು ಎಂದು ಸಿದ್ದು ಒತ್ತಾಯಿಸಿದರು.
ಪ್ರದೀಪ್ ಸಾವಿಗೆ ಕಾರಣರಾದವರ ವಿರುದ್ಧ ಕ್ರಮ ಆಗಬೇಕು. ಶಾಸಕರಾಗಲಿ ಯಾರೇ ಇರಲಿ ಕೂಡಲೇ ಬಂಧಿಸಬೇಕು. ಇಲ್ಲದಿದ್ದರೇ ಸಾಕ್ಷ್ಯ ನಾಶ ಮಾಡುತ್ತಾರೆ ಎಂದು ಹೇಳಿದರು.
ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣದಲ್ಲಿ ಕೆ.ಎಸ್ ಈಶ್ವರಪ್ಪ ಹೆಸರು ಕೇಳಿ ಬಂದಿತ್ತು. ಪ್ರಕರಣದಲ್ಲಿ ಬಿ ರಿಪೋರ್ಟ್ ಹಾಕಿದರು.
ಈಗ ಅದೇ ರೀತಿ ಪ್ರದೀಪ್ ಆತ್ಮಹತ್ಯೆ ಪ್ರಕರಣದಲ್ಲೂ ಆಗಬಾರದು. ಸರ್ಕಾರ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದರು.
ಅನೇಕರು ದಯಾಮರಣ ಕೇಳುತ್ತಿದ್ದಾರೆ ಇದಕ್ಕೆ ಸರ್ಕಾರದ ಭ್ರಷ್ಟಾಚಾರವೇ ಕಾರಣ ಎಂದು ವಾಗ್ದಾಳಿ ನಡೆಸಿದರು.

