ಬೆಂಗಳೂರು: ಕಾಂಗ್ರೆಸ್ ಪಕ್ಷದವರು ಹಿಂದೆ ನಾವು ಬಿಡುಗಡೆ ಮಾಡಿದ್ದ ಚಾರ್ಜ್ ಶೀಟ್ ಗೆ ರಾಜ್ಯದ ಜನತೆಯ ಮುಂದೆ ಉತ್ತರ ಕೊಟ್ಟು ನಂತರ ನಮ್ಮ ಬಗ್ಗೆ ಮಾತನಾಡಲಿ ಎಂದು ಸಿಎಂ ಬಸವರಾಜ ಬೊಮ್ಮಾಯಿ ಸವಾಲು ಹಾಕಿದ್ದಾರೆ.
ಬುಧವಾರ ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಾವು ಅವರಿಗಿಂತ ಮೊದಲೇ ಚಾರ್ಜ್ ಶೀಟ್ ಬಿಡುಗಡೆ ಮಾಡಿದ್ದೆವು.ಇದಕ್ಕೆ ಅವರು ಉತ್ತರ ಕೊಟ್ಟಿದ್ದಾರಾ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಬಿಡುಗಡೆ ಮಾಡಿರುವ ಚಾರ್ಜ್ ಶೀಟ್ ನಲ್ಲಿ ಯಾವುದೇ ಹುರುಳಿಲ್ಲ. ಎಲ್ಲವೂ ಸತ್ಯಕ್ಕೆ ದೂರವಾದುದು ಸುಮ್ಮನೆ ಆರೋಪಗಳನ್ನು ಮಾಡಿದ್ದಾರೆ ಎಂದು ಅಸಾಮಾಧಾನ ವ್ಯಕ್ತಪಡಿಸಿದರು.
ಮೊದಲು ಅವರ ಕಾಲದಲ್ಲಿ ನಡೆದಿರುವ ಕರ್ಮಕಾಂಡಗಳಿಗೆ ಉತ್ತರ ಕೊಡಲಿ ಎಂದು ಒತ್ತಾಯಿಸಿದರು.
ಚುನಾವಣಾ ವರ್ಷ ಆಗಿರುವುದರಿಂದ ಇಂತಹ ಆರೋಪಗಳು ಬರುವುದು ಸಾಮಾನ್ಯ. ಇದಕ್ಕೆ ಹೆಚ್ಚು ಗಮನಹರಿಸಬೇಕಾದ ಅಗತ್ಯವಿಲ್ಲ ಎಂದು ಬೊಮ್ಮಾಯಿ ಹೇಳಿದರು.

