ಕಲಬುರಗಿ: ಸ್ಯಾಂಟ್ರೊ ರವಿ ಬಿಜೆಪಿ ಸಕ್ರೀಯ ಕಾರ್ಯಕರ್ತ ಎಂದು ಪೊಲೀಸ್ ಠಾಣೆಯಲ್ಲಿ ಮುಚ್ಚಳಿಕೆ ಬರೆದು ಕೊಟ್ಟಿದ್ದಾನೆ. ನೈತಿಕತೆ ಬಗ್ಗೆ ಯಾವ ಮುಖ ಇಟ್ಟುಕೊಂಡು ಆ ಪಕ್ಷ ಜನರಿಗೆ ಭೋಧನೆ ಮಾಡುತ್ತದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ಸೇಡಂ ಬಳಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದರು.
ಪೊಲೀಸ್ ಪ್ರಕರಣ ಒಂದರಲ್ಲಿ ಸ್ಯಾಂಟ್ರೊ ರವಿ ವಿರುದ್ಧ ಜಗದೀಶ್ ಎಂಬುವರು ಬೆಂಗಳೂರಿನ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ವರ್ಗಾವಣೆ ವಂಚನೆ ವಿಷಯಕ್ಕೆ ದೂರು ದಾಖಲಿಸಿದ್ದರು ಎಂದು ಹೇಳಿದರು.
ಅದಕ್ಕೆ ಪ್ರತಿಯಾಗಿ ಮುಚ್ಚಳಿಕೆಯಲ್ಲಿ ಸ್ಯಾಂಟ್ರೊ ರವಿ, ತಾನು ಬಿಜೆಪಿ ಸಕ್ರಿಯ ಕಾರ್ಯಕರ್ತ, ನನಗೆ ಆ ಪಕ್ಷದ ಎಲ್ಲ ನಾಯಕರು ಗೊತ್ತು, ಅನೇಕ ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿಸಿದ್ದೇನೆ ಎಂದು ಬರೆದುಕೊಟ್ಟಿದ್ದಾನೆ ಎಂದು ತಿಳಿಸಿದರು.
ಇದೇ ವೇಳೆ ಅವರು ಸ್ಯಾಂಟ್ರೊ ರವಿ ಪೊಲೀಸರಿಗೆ ಬರೆದುಕೊಟ್ಟರುವ ಮುಚ್ಚಳಿಕೆಯನ್ನು ಓದಿದರು.
ಇದು ಏನನ್ನು ಸೂಚಿಸುತ್ತದೆ, ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರು ಈ ಬಗ್ಗೆ ಏನು ಹೇಳುತ್ತಾರೆ ಎಂದು ಎಚ್ ಡಿಕೆ ಪ್ರಶ್ನಿಸಿದರು.
ಅಷ್ಟೇ ಅಲ್ಲ ಆ ಮುಚ್ಚಳಿಕೆಯಲ್ಲಿ ವರ್ಗಾವಣೆ ಮಾಡಿಸಿದ ಅಧಿಕಾರಿಗಳ ಪಟ್ಟಿ ಬರೆದಿದ್ದಾನೆ. ಇವರಿಗೆ ನಾಚಿಕೆ ಆಗುವುದಿಲ್ಲವೇ ಎಂದು ಕುಮಾರಸ್ವಾಮಿ ಅವರು ಕಿಡಿಕಾರಿದರು.
ಇವರು ಪವಿತ್ರ ಕೇಸರಿ ಬಟ್ಟೆ ಇಟ್ಟುಕೊಂಡು ರಾಜಕಾರಣ ಮಾಡುತ್ತಿದ್ದಾರೆ. ಸ್ಯಾಂಟ್ರೋ ರವಿ, ಸೈಲೆಂಟ್ ಸುನಿಲ, ಫೈಟರ್ ರವಿ ಅಂಥವರ ಹೆಗಲ ಮೇಲೆ ಕೇಸರಿ ಹಾಕಿದ್ದಾರೆ.
ಪವಿತ್ರ ಕೇಸರಿ ಬಟ್ಟೆ ಹಾಕಿ ಅದರ ಪಾವಿತ್ರ್ಯತೆಯನ್ನು ಬಿಜೆಪಿಯವರು ಹಾಳು ಮಾಡಿದ್ದಾರೆ. ಇಂತವರು ದೇಶಕ್ಕೆ ಉಪದೇಶ ಮಾಡುತ್ತಾರೆ ನಾಚಿಕೆಯಾಗಬೇಕು ಎಂದು ಕಿಡಿಕಾರಿದರು.

