ಬಿಜೆಪಿ 135 ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಿ ಅಧಿಕಾರಕ್ಕೆ -ರಾಜೀವ್ ಬಬ್ಬರ್

ಮೈಸೂರು: ಕರ್ನಾಟಕದಲ್ಲಿ ಈ ಬಾರಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 135 ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಿ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ದೆಹಲಿಯ ಬಿಜೆಪಿ ರಾಜ್ಯ ಉಪಾಧ್ಯಕ್ಷ ರಾಜೀವ್ ಬಬ್ಬರ್ ತಿಳಿಸಿದರು.

ಬುಧವಾರ ಬಿಜೆಪಿ ಮೈಸೂರು ವಿಭಾಗ ಮಾಧ್ಯಮ ಕೇಂದ್ರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ನಾವು ಈಗಾಗಲೇ ಕರ್ನಾಟಕದಲ್ಲಿ ಆಂತರಿಕ ಸಮೀಕ್ಷೆಯನ್ನು ನಡೆಸಿದ್ದು ಅದರಲ್ಲಿ ಬಿಜೆಪಿ 135 ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂಬ ವರದಿ ಬಂದಿದೆ ಎಂದು ತಿಳಿಸಿದರು.

ಈಗಾಗಲೇ ದೇಶದಲ್ಲಿ ಕಾಂಗ್ರೆಸ್ ತನ್ನ ಅಸ್ತಿತ್ವ ಕಳೆದುಕೊಂಡಿದೆ. ಕರ್ನಾಟಕದಲ್ಲಿ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುವುದಕ್ಕೆ ಹೋರಾಟವನ್ನು ನಡೆಸುತ್ತಿದೆ. ಆದರೆ ರಾಜ್ಯದ ಜನರು ಈ ಬಾರಿಯೂ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಕನಸನ್ನು ನನಸು ಮಾಡುವುದಿಲ್ಲ ಎಂದು ಹೇಳಿದರು.

ಮೈಸೂರು ನಗರ ಅಭಿವೃದ್ಧಿಯಾಗುವುದಕ್ಕೆ ಸಾಕಷ್ಟು ಅವಕಾಶವನ್ನು ಸರ್ಕಾರ ನೀಡಿದೆ ಎಂದು ತಿಳಿಸಿದರು. 

ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಾಗೂ ಕಾಂಗ್ರೆಸ್ ನ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲ ಅವರು ರಾಜ್ಯ ಬಿಜೆಪಿ ಸರ್ಕಾರವನ್ನು 40% ಕಮಿಷನ್ ಸರ್ಕಾರ ಎಂದು ಆರೋಪಿಸಿದ್ದಾರೆ.

ಆದರೆ ಡಿ.ಕೆ.ಶಿವಕುಮಾರ್ ಅವರು ಭ್ರಷ್ಟಾಚಾರದ ಆರೋಪದಲ್ಲಿ ಜೈಲಿಗೆ ಹೋಗಿ ಬಂದು, ಈಗ ಬೇಲ್ ಪಡೆದು ಹೊರಗಿದ್ದಾರೆ.

ಇದೇ ರೀತಿ ಕಾಂಗ್ರೆಸ್‌ನ  ಶೇಕಡ 50ರಷ್ಟು ನಾಯಕರು ಭ್ರಷ್ಟಾಚಾರದ ಆರೋಪದಲ್ಲಿ ಸಿಲುಕಿದ್ದಾರೆ.ಇನ್ನು ಶೇಕಡ 50ರಷ್ಟು ನಾಯಕರ ಮೇಲೆ ಎಫ್ ಐಆರ್ ಆಗಿದೆ.ಹಾಗಾಗಿ ಕಾಂಗ್ರೆಸ್  ಭ್ರಷ್ಟಾಚಾರ ಪಕ್ಷವಲ್ಲವೇ ಎಂದು ತಿರುಗೇಟು ನೀಡಿದರು.

ರಾಜ್ಯ ಬಿಜೆಪಿ ಸರ್ಕಾರ ಒಂದುವರೆ ಲಕ್ಷ ಕೋಟಿ ಹಣವನ್ನು ಲೂಟಿ ಮಾಡಿದೆ ಎಂದು ಪ್ರಿಯಾಂಕಾ ಗಾಂಧಿ ಆರೋಪಿಸಿದ್ದಾರೆ.ಆದರೆ ಅವರ ಪತಿ ರಾಬರ್ಟ ವಾದ್ರಾ ಕೂಡ ಭ್ರಷ್ಟಾಚಾರದ ಆರೋಪ ಎದುರಿಸುತ್ತಿದ್ದು, ಬೇಲ್ ಮೇಲಿದ್ದಾರೆ. 

ಇದನ್ನು ಮರೆತು ಬಿಜೆಪಿ ಮೇಲೆ ಪ್ರಿಯಾಂಕಾ ಗಾಂಧಿ  ಭ್ರಷ್ಟಾಚಾರದ ಆರೋಪ ಮಾಡುವುದಕ್ಕೆ ಯಾವ ನೈತಿಕತೆ ಇದೆ ಎಂದು ವಾಗ್ದಾಳಿ ನಡೆಸಿದರು.

ಎನ್.ಆರ್.ಕ್ಷೇತ್ರದಲ್ಲಿ ಇಷ್ಟು ವರ್ಷಗಳ ತನಕ ಯಾವುದೇ ಅಭಿವೃದ್ಧಿ ಆಗಿಲ್ಲ ಹಾಗಾಗಿ ಈ ಬಾರಿ ನಮ್ಮ ಪಕ್ಷದ ಅಭ್ಯರ್ಥಿ ಸಂದೇಶ್ ಸ್ವಾಮಿಯನ್ನು ಬಹುಮತದಿಂದ ಗೆಲ್ಲಿಸಿ ಕೊಡಬೇಕು, ಕ್ಷೇತ್ರದಲ್ಲಿ ಎಲ್ಲಾ ಮೂಲ ಸೌಕರ್ಯಗಳನ್ನು ಒದಗಿಸಿಕೊಡಲಾಗುವುದು ಎಂದು ರಾಜೀವ್ ಬಬ್ಬರ್ ಭರವಸೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ  ಎನ್ ಆರ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಂದೇಶ್ ಸ್ವಾಮಿ,ಚಿತ್ರನಟ ಹಾಗೂ ಬಿಜೆಪಿ ಮುಖಂಡ ಎಸ್ ಜಯಪ್ರಕಾಶ್ ( ಜೆಪಿ) ಜಿಲ್ಲಾ ಸಹ ವಕ್ತಾರ ಡಾ. ಕೆ ವಸಂತ್ ಕುಮಾರ್, ಬಿಜೆಪಿ ರಾಜ್ಯ ಪರಿಷತ್ ಕಾರ್ಯಕಾರಣಿ ಸದಸ್ಯ ಬಿ.ಪಿ ಮಂಜುನಾಥ್, ಎನ್.ಆರ್ ಕ್ಷೇತ್ರದ ಅಧ್ಯಕ್ಷ ಭಾನುಪ್ರಕಾಶ್, ವೀಕ್ಷಕಿ ಸೌಧಮಣಿ ಜಿಲ್ಲಾ ಮಾಧ್ಯಮ ಸಂಚಾಲಕ ಮಹೇಶ್ ರಾಜ ಅರಸ್, ಸಹ ವಕ್ತಾರ ಕೇಬಲ್ ಮಹೇಶ್ ಮತ್ತಿತರರು, ಉಪಸಿತರಿದ್ದರು.