ಮೈಸೂರು: ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಮಾಡುತ್ತಿರುವ ಭ್ರಷ್ಟಾಚಾರದ ಆರೋಪ ಸಂಪೂರ್ಣ ಸುಳ್ಳು,ಸತ್ಯಕ್ಕೆ ದೂರವಾದುದು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಪ್ರಭಾರಿ ಅರುಣ್ ಸಿಂಗ್ ಕಾಂಗ್ರೆಸ್ ಗೆ ಟಾಂಗ್ ನೀಡಿದರು.
ಮೈಸೂರಿನ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಕಾಂಗ್ರೆಸ್ ಏನೇ ಆರೋಪ ಮಾಡಿದರೂ ಜನ ನಂಬುವುದಿಲ್ಲ, ಅವರು ಸತ್ಯ ಏನು ಎಂಬುದನ್ನು ಅರಿತಿದ್ದಾರೆ. ಹಾಗಾಗಿ ಭ್ರಷ್ಟಾಚಾರದ ಬಗ್ಗೆ ಕಾಂಗ್ರೆಸ್ ಮಾಡಿರುವ ಆರೋಪವನ್ನು ನಂಬದೇ ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿ ಅಧಿಕಾರಕ್ಕೆ ತರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ಅವರು ಬೆಲೆ ಏರಿಕೆ ಬಗ್ಗೆ ಪ್ರಸ್ತಾಪಿಸಿ ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸುವಂತೆ ಮನವಿ ಮಾಡಿದ್ದಾರಲ್ಲ ಎಂದು ಮಾಧ್ಯಮದವರು ಪ್ರಶ್ನಿಸಿದರು.
ಇದಕ್ಕೆ ಅರುಣ್ ಸಿಂಗ್ ಉತ್ತರಿಸಿ ಅವರು ಉತ್ತರ ಪ್ರದೇಶ, ಉತ್ತರಾಂಚಲ, ಅಸ್ಸಾಂ ಗಳಲ್ಲೂ ಇದೇ ರೀತಿ ಹೇಳಿದ್ದರು.
ಆದರೆ ಅಲ್ಲಿನ ಜನ ಅದನ್ನೆಲ್ಲ ನಂಬದೇ ದೇಶದ ಅಭಿವೃದ್ಧಿ, ರಕ್ಷಣೆ ಹಾಗೂ ಮೋದಿಯವರ ಕಾರ್ಯ ವೈಖರಿ ನೋಡಿ ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿ ಅಧಿಕಾರಕ್ಕೆ ತಂದಿದ್ದಾರೆ ಆಕೆ ಹೋದಡೆಯಲ್ಲೆಲ್ಲಾ ಸೋಲು ಕಟ್ಟಿಟ್ಟ ಬುತ್ತಿ ಎಂದು ಟೀಕಿಸಿದರು.
ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಷದೀಪ್ ಸಿಂಗ್ ಸುರ್ಜೆವಾಲ ಅವರು ರಾಜ್ಯ ಸರ್ಕಾರ ತಂದಿದ್ದ ಮೀಸಲಾತಿಯನ್ನು ಸುಪ್ರೀಂ ಕೋರ್ಟ್ ತಿರಸ್ಕಾರ ಮಾಡಿದೆ ಹಾಗಾಗಿ ಬಿಜೆಪಿಯನ್ನು ನಂಬಬೇಡಿ ಎಂದು ಹೇಳಿದ್ದಾರಲ್ಲ ಎಂಬ ವರದಿಗಾರರ ಪ್ರಶ್ನೆಗೆ ನ್ಯಾಯಾಲಯ ಸಂಪೂರ್ಣವಾಗಿ ತಿರಸ್ಕಾರ ಮಾಡಿಲ್ಲ ದಾಖಲಾತಿ ಸಲ್ಲಿಸುವಂತೆ ಹೇಳಿದೆ ಎಂದು ತಿಳಿಸಿದರು.
ಈಗ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ ಹಾಗಾಗಿ ಚುನಾವಣೆ ಸಂಪೂರ್ಣವಾಗಿ ಮುಗಿದ ನಂತರ ಸಂಪೂರ್ಣ ದಾಖಲಾತಿಗಳನ್ನು ಶೇಖರಿಸಿ ನ್ಯಾಯಾಲಯಕ್ಕೆ ಸಲ್ಲಿಸುತ್ತೇವೆ ಎಂದು ಹೇಳಿದರು.
ಈಗ ಬಿಜೆಪಿ ನೀಡಿರುವ ಮೀಸಲಾತಿ ರದ್ದು ಮಾಡಿ ಮುಸ್ಲಿಮರಿಗೆ ಕೊಡುತ್ತೇವೆ ಎಂದು ಕಾಂಗ್ರೆಸ್ ಹೇಳಿದೆ ಹಾಗಾದರೆ ಯಾರಿಂದ ಕಿತ್ತು ಮುಸ್ಲಿಮರಿಗೆ ಕೊಡುತ್ತಾರೆ ಎಂದು ಅರುಣ್ ಸಿಂಗ್ ಪ್ರಶ್ನಿಸಿದರು.
ಕಾಂಗ್ರೆಸ್ ನವರು ಮಾತೆತ್ತಿದರೆ ಭ್ರಷ್ಟಾಚಾರ ಎನ್ನುತ್ತಾರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತ ವಿದ್ಯಾರ್ಥಿಗಳಿಗೆ ಓದಲು ನೂರಾರು ಕೋಟಿ ಹಣ ಕೊಟ್ಟಿದೆ, ಆ ಹಣ ಎಲ್ಲಿ ದುರುಪಯೋಗ ಆಗಿದೆ ಎಂಬುದನ್ನು ಹೇಳಲಿ ಎಂದು ಸವಾಲು ಹಾಕಿದರು.
ಇದೆ ವೇಳೆ ಶಾಸಕ ಎಸ್. ಎ ರಾಮದಾಸ್ ಅವರನ್ನು ಹೊಗಳಿದ ಅರುಣ್ ಸಿಂಗ್ ರಾಮದಾಸ್ ಅವರು ಎಲ್ಲರಿಗೂ ಮಾದರಿ ವ್ಯಕ್ತಿಯಾಗಿದ್ದಾರೆ ಎಂದು ಕೊಂಡಾಡಿದರು.
ರಾಮದಾಸ್ ಎಲ್ಲರಿಗೂ ಸ್ಪೂರ್ತಿಯಾಗಿದ್ದಾರೆ, ಕೆಆರ್ ಕ್ಷೇತ್ರದಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಶ್ರೀವತ್ಸ ಅವರನ್ನು ಸಂಪೂರ್ಣ ಬಹುಮತದಿಂದ ಗೆಲ್ಲಿಸಿ ಕೊಡುವುದಾಗಿ ಅವರು ಭರವಸೆ ನೀಡಿದ್ದಾರೆ ಎಂದು ಹೇಳಿದರು.
ಜಗದೀಶ್ ಶೆಟ್ಟರ್ ಅವರು ಬಿಜೆಪಿಯಿಂದ ಆರು ಬಾರಿ ಸ್ಪರ್ಧಿಸಿ ಗೆದ್ದು ಮುಖ್ಯಮಂತ್ರಿ, ಸಚಿವ ಹುದ್ದೆ ಹಾಗೂ ನಮ್ಮ ಪಕ್ಷದ ಅಧ್ಯಕ್ಷರಾಗಿ ಎಲ್ಲಾ ಅಧಿಕಾರವನ್ನು ಅನುಭವಿಸಿ ಈಗ ಕಾಂಗ್ರೆಸ್ ಗೆ ಹೋಗಿದ್ದಾರೆ.
ಅವರೇ ಬೇರೆಯವರಿಗೆ ಅವಕಾಶ ನೀಡಬಹುದಿತ್ತು ಆದರೆ ಅವರು ಹಾಗೆ ಮಾಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಈ ಬಾರಿ ರಾಜ್ಯದಲ್ಲಿ ಬಿಜೆಪಿ 150 ಕ್ಷೇತ್ರಗಳಲ್ಲಿ ಗೆದ್ದು ಸ್ವತಂತ್ರವಾಗಿ ಅಧಿಕಾರಕ್ಕೆ ಬರಲಿದೆ ಎಂದು ಅರುಣ್ ಸಿಂಗ್ ವಿಶ್ವಾಸ ವ್ಯಕ್ತಪಡಿಸಿದರು.

