ಬೆಂಗಳೂರು: ಟ್ರ್ಯಾಕ್ಟರ್‌ಗೆ ಮಾರುತಿ ಕಾರಿನ ಚಕ್ರ ಹಾಕಿದ್ರೆ ಸರಿಯಾಗಿ ಓಡುತ್ತಾ,ಇಲ್ಲಾ ಅಲ್ಲವಾ ಹಾಗೆಯೇ ಡಬಲ್ ಇಂಜಿನ್ ಸರ್ಕಾರ ಇದ್ದರೇ ಸಾಕಷ್ಟು ಅಭಿವೃದ್ಧಿ ಕಾಣಲು ಸಾಧ್ಯ ಎಂದು ಪ್ರಧಾನಿ ಮೋದಿ ನುಡಿದರು.
ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆ ಬಿಜೆಪಿ 50 ಲಕ್ಷ ಕಾರ್ಯಕರ್ತರೊಂದಿಗೆ ಮೋದಿ ಅವರು ಗುರುವಾರ ವರ್ಚುವಲ್ ಸಭೆ ನಡೆಸಿ ಅಗತ್ಯ ಸಲಹೆ ನೀಡಿದರು
ನಮ್ಮ ಕಾರ್ಯಕರ್ತರು ಬಿಜೆಪಿಯನ್ನು ದಾಖಲೆಯ ಸ್ಥಾನಗಳಲ್ಲಿ ಗೆಲ್ಲಿಸುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.
2 ದಿನಗಳ ನಂತರ ನಾನು ರಾಜ್ಯದ ಜನರ ದರ್ಶನಕ್ಕೆ, ಆಶೀರ್ವಾದಕ್ಕೆ ಬರುತ್ತಿದ್ದೇನೆ. ರಾಜ್ಯದಲ್ಲಿ ಎಲ್ಲೇ ಹೋದರೂ ಅಲ್ಲಿನ ಜನ ಹೃದಯ ಪೂರ್ವಕ ಆಶೀರ್ವಾದ ಮಾಡಿದ್ದಾರೆ.
ರಾಜ್ಯ ಬಿಜೆಪಿ ಘಟಕ ಇಷ್ಟೊಂದು ದೊಡ್ಡ ಕಾರ್ಯಕ್ರಮ ಆಯೋಜಿಸಿರುವುದು ಅಭಿನಂದನಾರ್ಹ ಎಂದು ನುಡಿದರು.
ಕಾರ್ಯಕರ್ತರ ಪ್ರಶ್ನೆಗಳಿಗೆ ಮೋದಿ ಉತ್ತರಿಸಿದ್ದು ಹೀಗೆ:
ಶಿವಮೊಗ್ಗದ ವಿರೂಪಾಕ್ಷಪ್ಪ ಅವರ ಕಾರ್ಯಕರ್ತರಿಗೆ ನಿಮ್ಮ ಸಲಹೆಗಳೇನು ಎಂಬ ಪ್ರಶ್ನೆಗೆ ಉತ್ತರಿಸಿದ ಮೋದಿ, ತಲಾ 10 ಮಹಿಳೆಯರು, 20 ಪುರುಷರ ತಂಡ ರಚಿಸಿ ಬೂತ್ ಮಟ್ಟದಲ್ಲಿ ಡಬಲ್ ಎಂಜಿನ್ ಸರ್ಕಾರದ ಸಾಧನೆ ತಿಳಿಸಿ ಎಂದು ಸಲಹೆ ನೀಡಿದರು
ಜನರ ಜೊತೆ ಒಡನಾಡಿಯಾಗಿ, ಕಷ್ಟ ಸುಖ ಕೇಳಿ, ಆತ್ಮೀಯವಾಗಿ ಮಾತನಾಡಿಸಿ. ಕೇಂದ್ರ, ರಾಜ್ಯ ಸರ್ಕಾರಗಳ ಯೋಜನೆಗಳ ಬಗ್ಗೆ ತಿಳಿಸಿ. ಅದರ ಫಲ ಸಿಕ್ಕಿದೆಯಾ ಎಂದು ತಿಳಿದುಕೊಳ್ಳಿ ಬಿಜೆಪಿಗೆ ಮತ ಹಾಕುವಂತೆ ಪ್ರೇರೇಪಿಸಿ ಎಂದು ತಿಳಿಸಿದರು.
ವಿರೋಧ ಪಕ್ಷದವರ ಅಜೆಂಡಾ ಅರ್ಥ ಮಾಡಿಕೊಂಡು ಕೆಲಸ ಮಾಡಿ. ಪೂರ್ಣಬಹುಮತ ಬಗ್ಗೆ ಜನರಲ್ಲಿ ಮನವರಿಕೆ ಮಾಡಿಸಿ. ಒಂದೇ ಸರ್ಕಾರದ ಮಹತ್ವ ತಿಳಿಸಿಕೊಡಿ ಎಂದು ಹೇಳಿದರು.
ಮೊಳಕಾಲ್ಮೂರು ಕಾರ್ಯಕರ್ತ ಫಕೀರಪ್ಪ ಅವರ ಡಬಲ್ ಎಂಜಿನ್ ಸರ್ಕಾರದ ಪ್ರಯೋಜನಗಳೇನು ಎಂಬ ಪ್ರಶ್ನೆಗೆ ಎರಡೂ ಕಡೆ ಒಂದೇ ಪಕ್ಷದ ಸರ್ಕಾರ ಇದ್ದರೆ ಅಭಿವೃದ್ಧಿಗೆ ಪೂರಕವಾಗುತ್ತದೆ ಎಂದು ಹೇಳಿದರು.
ಕಿಸಾನ್ ಸಮ್ಮಾನ್ ನಿಧಿಯಡಿ ಡಬಲ್ ಎಂಜಿನ್ ಸರ್ಕಾರಗಳಿಂದ ನೆರವು ಸಿಗುತ್ತಿದೆ. ಕೇಂದ್ರ, ರಾಜ್ಯ ಸರ್ಕಾರಗಳು ರೈತರಿಗೆ ಆರ್ಥಿಕ ನೆರವು ಕೊಡುತ್ತಿವೆ. ಒಂದು ವೇಳೆ ಇಲ್ಲಿ ಬೇರೆ ಪಕ್ಷದ ಸರ್ಕಾರ ಬಂದರೆ ಸದಾ ಜಗಳ ಆಗುತ್ತದೆ. ಇದರಿಂದ ಅಭಿವೃದ್ಧಿ ಕುಂಠಿತವಾಗುತ್ತದೆ ಎಂದು ತಿಳಿಸಿದರು.
ಟ್ರ‍್ಯಾಕ್ಟರ್‌ಗೆ ಮಾರುತಿ ಕಾರಿನ ಚಕ್ರ ಹಾಕಿದರೆ ಆ ಟ್ರ್ಯಾಕ್ಟರ್ ಸರಿಯಾಗಿ ಓಡುತ್ತಾ, ಇಲ್ಲಾ ತಾನೆ. ಒಂದೇ ತರಹದ ಚಕ್ರ ಇದ್ದರೆ ಮಾತ್ರ ಓಡುತ್ತದೆ. ಹಾಗೆಯೇ ಡಬಲ್ ಎಂಜಿನ್ ಸರ್ಕಾರ ಕೂಡಾ. ವಿಕಾಸದ ವೇಗ ಡಬಲ್ ಎಂಜಿನ್ ಸರ್ಕಾರದಲ್ಲಿ ಹೆಚ್ಚಾಗಿರುತ್ತದೆ ಎಂದು ಮೋದಿ ಬಿಡಿಸಿ ಹೇಳಿದರು.
ಬಿಜೆಪಿ ಯುವ ತಂಡ ರಚನೆಗೆ ಪ್ರಯತ್ನ ಮಾಡುತ್ತಿದೆ. ಕರ್ನಾಟಕ ಅದರಲ್ಲೂ ಬೆಂಗಳೂರಿಗೆ ವಿಶ್ವದಲ್ಲಿ ಉತ್ತಮ ಹೆಸರಿದೆ. 2014 ರವರೆಗೆ ಏಮ್ಸ್ ಸಂಸ್ಥೆಗಳ ಸಂಖ್ಯೆ 7 ಇದ್ದವು. ನಾವು ಬಂದ ಮೇಲೆ 3 ಪಟ್ಟು ಏಮ್ಸ್ ಸಂಸ್ಥೆಗಳ ನಿರ್ಮಾಣ ಆಗಿದೆ. ಈಗ 20 ಏಮ್ಸ್ ಸಂಸ್ಥೆಗಳು ಇವೆ.
ಆಗ ಫಲಾನುಭವಿಗಳ ಬಗ್ಗೆ ಯೋಚನೆ ಮಾಡುತ್ತಿರಲಿಲ್ಲ. ನಾವು ಫಲಾನುಭವಿಗಳ ಇಚ್ಚೆಗನುಸಾರ ಮನೆ ಕಟ್ಟಿಸಿಕೊಡುತ್ತಿದ್ದೇವೆ. ನೀರು, ವಿದ್ಯುತ್, ಅಡುಗೆ ಅನಿಲ ಎಲ್ಲವೂ ಸಿಗುತ್ತಿದೆ.
ಭ್ರಷ್ಟಾಚಾರ ವಿರುದ್ಧದ ಹೋರಾಟದಲ್ಲಿ ಮೊದಲಿಗಿಂತ ಈಗ ಹೆಚ್ಚು ಸುಧಾರಣೆ ಆಗಿದೆ. ಕಾಂಗ್ರೆಸ್ ಖುದ್ದು ಭ್ರಷ್ಟಾಚಾರಿ ಪಕ್ಷ. 2014ರ ಬಳಿಕ ಭ್ರಷ್ಟಾಚಾರ ನಿಯಂತ್ರಣದಲ್ಲಿ ವೇಗ ವೃದ್ಧಿಸಿದೆ ಎಂದು ನರೇಂದ್ರ ಮೋದಿ ಹೇಳಿದರು.

