ಮೈಸೂರು: ರಾಜ್ಯದ ಜನತೆ ಬದಲಾವಣೆ ಬಯಸಿದ್ದು ಈ ಬಾರಿ ಕಾಂಗ್ರೆಸ್ ಗೆ ಸ್ಪಷ್ಟ ಬಹುಮತ ಬರುತ್ತದೆ ಎಂದು ವಿರೋಧ ಪಕ್ಷದ ನಾಯಕ ಹಾಗೂ ವರುಣಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.
ಮೈಸೂರಿನ ಪತ್ರಕರ್ತರ ಭವನದಲ್ಲಿ ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡಿದ ಅವರು ಈ ಬಾರಿ ಅತಂತ್ರ ವಿಧಾನ ಸಭೆ ರಚನೆಯಾಗುವುದಿಲ್ಲ ಎಂದು ತಿಳಿಸಿದರು.
ಆಪರೇಷನ್ ಕಮಲ ಪರಿಚಯವಾಗಿದ್ದೇ ಬಿಜೆಪಿಯಿಂದ ಎಂದು ದೂರಿದರು.
ಬಿಜೆಪಿ ಸರ್ಕಾರದ 40% ಕಮೀಷನ್ ವಿರುದ್ಧ ಬೇಸತ್ತು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಪ್ರಧಾನಿಗೆ ಪತ್ರ ಬರೆದಿದ್ದರು.
ಆದರೆ ಸರ್ಕಾರ ಕ್ರಮ ತೆಗೆದುಕೊಳ್ಳಲಿಲ್ಲ. ರುಕ್ಸಾ ಸಂಸ್ಥೆ ಕೂಡ ಮುಖ್ಯ ಮಂತ್ರಿ ಹಾಗೂ ಪ್ರಧಾನಿಗೆ ಇದು 40% ಸರಕಾರ ಎಂದು ಪತ್ರ ಬರೆದಿತ್ತು.ಆದರೂ ಕ್ರಮ ಜರುಗಿಸಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪಿಎಸ್ಐ ಹಗರಣಕ್ಕೆ ಬಿಜೆಪಿಯವರೇ ಕಾರಣ ಎಂದು ಸಂತೋಷ ಪಾಟೀಲ್ ಹೇಳಿದ್ದರು. ಆದರೆ ಇದುವರೆಗೂ ಇದ್ಯಾ ವುದರ ಬಗ್ಗೆಯೂ ಕ್ರಮ ತೆಗೆದುಕೊಳ್ಳಲಿಲ್ಲ ಎಂದು ಸಿದ್ದು ಕಿಡಿಕಾರಿದರು.
ನನ್ನ ಅವಧಿಯಲ್ಲಿ ಬಡವರಿಗೆ 15 ಲಕ್ಷ ಮನೆ ಕಟ್ಟಿಸಿದ್ದೇನೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಒಂದು ಮನೆಯನ್ನು ಕಟ್ಟಿಸಿಕೊಟ್ಟಿಲ್ಲ ಎಂದು ಆರೋಪಿಸಿದರು.
ನೀವು ದ್ವೇಷದ ರಾಜಕೀಯ ಮಾಡುತ್ತಿದ್ದೀರಿ, ಮಿತಿ ಮೀರಿದ ಭ್ರಷ್ಟಾಚಾರ ನಡೆದಿದೆ.ಇದರಿಂದ ರಾಜ್ಯ ದಿವಾಳಿಯತ್ತ ಸಾಗಿದೆ ಎಂದು ಬಿಜೆಪಿಯನ್ನು ಸಿದ್ದು ತರಾಟೆಗೆ ತೆಗೆದುಕೊಂಡರು.
ನಾವು 5 ಗ್ಯಾರಂಟಿ ನೀಡಿದ್ದೇವೆ, ಅಧಿಕಾರಕ್ಕೆ ಬಂದಾಗ ಖಂಡಿತ ಅವನ್ನು ಈಡೇರಿಸಲಿದ್ದೇವೆ ಎಂದು ಹೇಳಿದರು.
ಕಾಂಗ್ರೆಸ್ ಗೆ ಒಂದು ಅವಕಾಶ ನೀಡಬೇಕು ಎಂದು ಜನ ತೀರ್ಮಾನ ಮಾಡಿದ್ದಾರೆ. ನೂರಕ್ಕೆ ನೂರು ಕಾಂಗ್ರೆಸ್ ಬರುತ್ತದೆ ಎಂದು ಹೇಳಿದರು.
ವರುಣ ಜನ ಜಾತಿ ವಾದಿಗಳಲ್ಲ,ಹೆಚ್ಚಿನ ಮತಗಳ ಅಂತರದಿಂದ ಗೆಲ್ಲುತ್ತೇನೆ ಎಂಬ ನಂಬಿಕೆ ಇದೆ ಎಂದು ಸಿದ್ದು ಹೇಳಿದರು.
ನರೇಂದ್ರ ಮೋದಿ ಅವರು ನೀಟ್’ ಪರೀಕ್ಷೆಯ ದಿನದಂದೇ (ಮೇ 7) ಬೆಂಗಳೂರಿನ ಪ್ರಮುಖ ಪ್ರದೇಶಗಳಲ್ಲಿ ಚುನಾವಣಾ ಪ್ರಚಾರಕ್ಕಾಗಿ ರೋಡ್ ಶೋ ನಡೆಸುತ್ತಿರುವುದು ಸರಿಯಲ್ಲ ಎಂದು ಸಿದ್ದರಾಮಯ್ಯ ಇದೇ ವೇಳೆ ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿಯ ಧೋರಣೆ ಹಾಗೂ ಈ ವಿಷಯದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ನೀಡಿರುವ ಹೇಳಿಕೆಯನ್ನು ಖಂಡಿಸುತ್ತೇನೆ.
ಮೋದಿ ಪ್ರಚಾರಕ್ಕೆ ನಮ್ಮ ವಿರೋಧವಿಲ್ಲ, ಆದರೆ, ವಿದ್ಯಾರ್ಥಿಗಳಿಗೆ ಅಗುವ ತೊಂದರೆಗಳಿಗೆ ಯಾರು ಹೊಣೆ ಎಂದು ಶೋಭಾ ಹೇಳಿಕೆಯನ್ನು ಖಂಡಿಸಿದರು.
ನನ್ನ ಮೊಮ್ಮಗ ಧವನ್ ರಾಕೇಶ್ ಇನ್ನೂ 17 ವರ್ಷದವನು. ಅವನು ಒಂದು ವೇಳೆ ರಾಜಕೀಯಕ್ಕೆ ಬರಬೇಕೆಂದರೂ ಇನ್ನೂ 8ರಿಂದ 10 ವರ್ಷ ಬೇಕಾಗಬಹುದು. ಅವನು ನನ್ನ ಉತ್ತರಾಧಿಕಾರಿ ಎಂದು ನಾನು ಹೇಳಿಯೇ ಇಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ನನ್ನ ಮಗನ ನಂತರ ನನ್ನ ಮೊಮ್ಮಗ ಬರಬಹುದು ಎಂದಷ್ಟೇ ಹೇಳಿದ್ದೇನೆ ಎಂದು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

