ಮತ್ತೆ ಸಿಎಂ ಆಗಬೇಕೆಂಬ  ಸಿದ್ದು ಕನಸು ಭಗ್ನವಾಗಲಿದೆ-ಸೋಮಣ್ಣ ಭವಿಷ್ಯ

ಮೈಸೂರು: ವರುಣಾ ಕ್ಷೇತ್ರದಿಂದ ಗೆದ್ದು ಮತ್ತೆ ಮುಖ್ಯ ಮಂತ್ರಿಯಾಗಬೇಕೆಂಬ  ಸಿದ್ದರಾಮಯ್ಯನವರ‌ ಕನಸು ಭಗ್ನವಾಗಲಿದೆ ಎಂದು ಸಚಿವ ಹಾಗೂ ವರುಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಭವಿಷ್ಯ ನುಡಿದರು

ಈ ಮೊದಲು ಈ ಕ್ಷೇತ್ರದಿಂದ ಗೆದ್ದು ತಮ್ಮ ಪಟಾಲಮ್ ಗಳಿಗೆ ಬಿಟ್ಟು ಹೋದ ಕಾರಣ ಪಟಾಲಮುಗಳ ಆಟಾಟೋಪ ಕಂಡಿರುವ ಇಲ್ಲಿನ ಜನತೆ ಸಿದ್ದರಾಮಯ್ಯ ಅವರಿಗೆ ಮತ ಹಾಕುವುದಿಲ್ಲ ಎಂದು ಹೇಳಿದರು.

ಮೈಸೂರು ಜಿಲ್ಲಾ ಪ್ರತಕರ್ತರ ಭವನದಲ್ಲಿ ಭಾನುವಾರ ಏರ್ಪಡಿಸಲಾಗಿದ್ದ ಪತ್ರಿಕಾ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಿದ್ದರಾಮಯ್ಯನವರು ಯಾವುದೇ ಅಭಿವೃದ್ಧಿ ಕೆಲಸಗಳನ್ನು ವರುಣಾದಲ್ಲಿ ಮಾಡಿಲ್ಲ, ಹಾಗಾಗು ಅವರನ್ನು ಕ್ಷೇತ್ರದ ಜನತೆ ತಿರಸ್ಕರಿಸಲಿದ್ದಾರೆ ಎಂದು ಹೇಳಿದರು.

ಸಿದ್ದರಾಮಯ್ಯ ಮತ್ತು ಅವರ ಪುತ್ರ ಯತೀಂದ್ರ ವರುಣಾದಲ್ಲಿ ಶಾಸಕರಾಗಿದ್ದರು. ಆದರೆ ಇವರಿಬ್ಬರೂ ಅಲ್ಲಿ ಜನಪರ ಕೆಲಸ ಮಾಡಿಲ್ಲ ಎಂದು ಸೋಮಣ್ಣ ಟೀಕಿಸಿದರು.

ನಾನು ಬೆಂಗಳೂರಿನ ಗೋವಿಂದರಾಜ ನಗರವನ್ನು ಎಷ್ಟು ಅಭಿವೃದ್ಧಿ ಮಾಡಿದ್ದೇನೆ ಎಂಬುದನ್ನು ನೋಡಲಿ.

ಇವರಿಬ್ಬರೂ ಈ ಕ್ಷೇತ್ರದಿಂದ ಆರಿಸಿ ಬಂದರೂ ನಾನು ಮಾಡಿರುವಷ್ಟು ಯಾವುದೇ ಜನಪರ ಕಾರ್ಯವನ್ನು ಮಾಡಲಿಲ್ಲ ಎಂದು ಆರೋಪಿಸಿದರು.

ಸಿದ್ದರಾಮಯ್ಯನವರು ಅದೃಷ್ಟದ ವ್ಯಕ್ತಿ. ಅವರು ಶಾಸಕ, ಡಿಸಿಎಂ, ಸಿಎಂ ಸ್ಥಾನದ ಅಧಿಕಾರವನ್ನು ಕೇವಲ ಅದೃಷ್ಟದಿಂಲೇ ಪಡೆದಿದ್ದಾರೆ ಎಂದು ಮಾರ್ಮಿಕವಾಗಿ ನುಡಿದರು.

ನಾನು ವರುಣಾ ಕ್ಷೇತ್ರವನ್ನು ಮತ್ತೊಂದು ಗೋವಿಂದರಾಜ ನಗರ ಮಾಡುವ ಭರವಸೆಯನ್ನು ಜನತೆಗೆ ನೀಡಿದ್ದೇನೆ. ಹಾಗಾಗಿ ಅಲ್ಲಿನ ಜನ ನನ್ನನ್ನು ಈ ಬಾರಿಯ ಚುನಾವಣೆಯಲ್ಲಿ ಬಹು ಮತಗಳ ಅಂತರದಿಂದ ಗೆಲ್ಲಿಸಲಿದ್ದಾರೆ ಎಂದು ಸೋಮಣ್ಣ ವಿಶ್ವಾಸ ವ್ಯಕ್ತಪಡಿಸಿದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸೋಮಣ್ಣ ಒಬ್ಬ ಮಾಜಿ ಮುಖ್ಯಮಂತ್ರಿ ಕ್ಷಮಿಸಿ ಕ್ಷಮಿಸಿ ಎಂದು ವರುಣಾ ಜನತೆಯಲ್ಲಿ ಮನವಿ ಮಾಡಬಾರದಿತ್ತು. ಅವರು ಅಂತಹ ತಪ್ಪು ಮಾಡಿದ್ದಾರೆ ಎಂಬುದು ಅವರು ಕ್ಷಮೆ ಕೇಳುತ್ತಿರುವುದರಲ್ಲೇ ಗೊತ್ತಾಗುತ್ತಿದೆ ಎಂದು ಹೇಳಿದರು.

ಈಗಾಗಲೇ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾರೆ. ಹಾಗಾಗಿ ಅವರಿಗೆ ಮತ್ತೆ ಸಿಎಂ ಸ್ಥಾನವನ್ನು ಕಾಂಗ್ರೆಸ್ ನೀಡುವುದಿಲ್ಲ.

ಅವರು ಮುಂದಿನ ಸಿಎಂ ಅಭ್ಯರ್ಥಿ ಅಲ್ಲ ಎಂಬುದು ವರುಣಾ ಕ್ಷೇತ್ರದ ಜನತೆಗೆ ಗೊತ್ತಾಗಿದೆ ಹಾಗಾಗಿ ಅಲ್ಲಿನ ಜನತೆ ನನ್ನನ್ನು ಗೆಲ್ಲುಸಲಿದ್ದಾರೆ ಎಂದು ಸೋಮಣ್ಣ ಹೇಳಿದರು.