ಸಿಲಿಕಾನ್ ಸಿಟಿಯಲ್ಲಿ ಮೋದಿ ಹವಾ

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಎರಡನೇ ದಿನವೂ ಮೋದಿ ಹವಾ ಜೋರಾಗಿಯೇ ಇತ್ತು.

ನ್ಯೂ ತಿಪ್ಪಸಂದ್ರದಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ರೋಡ್ ಶೋ ಆರಂಭವಾಯಿತು.

6 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 8 ಕಿ.ಮೀ ದೂರದವರೆಗೆ ರೋಡ್ ಶೋ ನಡೆಯಿತು.

ಮಹಾದೇವಪುರ, ಕೆ.ಆರ್ ಪುರಂ,ಸರ್ ಸಿ.ವಿ ರಾಮನ್ ನಗರ, ಸರ್ವಜ್ಞ ನಗರ, ಶಿವಾಜಿನಗರ, ಶಾಂತಿನಗರ ಕ್ಷೇತ್ರಗಳಲ್ಲಿ ಮೋದಿಯವರ ರೋಡ್ ಶೋ ಸಾಗಿತು.

ತಿಪ್ಪಸಂದ್ರ ಬಳಿ ಕೆಂಪೇಗೌಡ ಪ್ರತಿಮೆಗೆ ನಮಸ್ಕರಿಸಿ ಮೋದಿ ರೋಡ್ ಶೋ ಆರಂಭಿಸಿದರು.

ತೆರೆದ ವಾಹನದಲ್ಲಿ ಮೋದಿ ಅಬ್ಬರದ ರೋಡ್ ಶೋ ನಡೆಯಿತು.ಈ ವೇಳೆ ಮೋದಿ,ಮೋದಿ‌ ಎಂಬ ಘೋಷಣೆ ಸತತವಾಗಿ ಮೊಳಗುತ್ತಲೇ ಇತ್ತು. ಸಹಸ್ರಾರು ಜನರತ್ತ ಮೋದಿ ಕೈಬೀಸುತ್ತಾ,ಶಿರ ಬಾಗಿ‌ ನಮಸ್ಕರಿಸುತ್ತಾ ಸಾಗಿದ್ದು ವಿಶೇಷ.

ಮೋದಿಯನ್ನು ಸ್ವಾಗತಿಸಲು ಹೆಚ್ಚಿನ ಜನರು ಅದರಲ್ಲೂ ಮಹಿಳೆಯರು ಸಂಭ್ರಮದಿಂದ ಸೇರಿದ್ದರು.

ರಸ್ತೆಯುದ್ದಕ್ಕೂ ಸಾವಿರಾರು ಜನರು ಸೇರಿ ಮೋದಿಯನ್ನು ನೋಡಿ ಸಂತಸ ವ್ಯಕ್ತಪಡಿಸುತ್ತಿದ್ದುದು ಕಂಡುಬಂದಿತು. ರಸ್ತೆಯುದ್ದಕ್ಕೂ ಕೇಸರಿ ಬಾವುಟ ಹಾರಾಡುತ್ತಿದ್ದವು.

ರೋಡ್ ಶೋಗೆ ಕಲಾತಂಡಗಳು ಮೆರುಗು ತಂದುಕೊಟ್ಟಿತು. ಬಿಜೆಪಿ ಕಾರ್ಯಕರ್ತರಲ್ಲಿ ಉತ್ಸಾಹ ಮುಗಿಲು ಮುಟ್ಟಿದ್ದು, ಕಾರ್ಯಕರ್ತರು ಹೂಮಳೆ ಸುರಿಸಿ ಸಂಭ್ರಮಿಸಿದರು.