ಮೈಸೂರು: ದಸರಾ ನಾಡ ಹಬ್ಬ ಇದು ಜನರ ಹಬ್ಬ, ಆದರೆ ಈ ಬಾರಿ ಬರಗಾಲವಿದೆ. ಆದರೂ ಜನ ದಸರಾ ಸಂಭ್ರಮವನ್ನು ಸವಿಯುತ್ತಿರುವುದು ಖುಷಿಯ ವಿಷಯ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಅವರು ಮೈಸೂರು ಜಿಲ್ಲಾಡಳಿತ ಮತ್ತು ಭಾರತೀಯ ವಾಯುಪಡೆ ನಾಡಹಬ್ಬ ದಸರಾ ಪ್ರಯುಕ್ತ ಏರ್ಪಡಿಸಿದ್ದ ವೈಮಾನಿಕ ಪ್ರದರ್ಶನ ವೀಕ್ಷಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ಮೈಸೂರು ದಸರಾ ಸಂದರ್ಭದಲ್ಲಿ ಏರ್ ಶೋ ಏರ್ಪಡಿಸಲು ಕೇಂದ್ರ ಸಚಿವರನ್ನು ಕೋರಲಾಗಿತ್ತು. ಅದರಂತೆ ಏರ್ ಶೋ ಏರ್ಪಡಿಸಲಾಗಿದೆ.
ಹಿಂದೆ ಶ್ರೀಮತಿ ನಿರ್ಮಲಾ ಸೀತರಾಮನ್ ಅವರು ರಕ್ಷಣಾ ಸಚಿವರಾಗಿದ್ದಾಗ, ಇದೇ ರೀತಿ ಏರ್ ಶೋ ಏರ್ಪಡಿಸಲಾಗಿತ್ತು, ದಸರಾ ರಜೆಯ ಸಂದರ್ಭವಾದುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿ, ಏರ್ ಶೋ ವೀಕ್ಷಿಸಿದ್ದಾರೆ.
ಈ ಬಾರಿ ಬರಗಾಲವಿದೆ. ಆದರೂ ಜನ ದಸರಾದ ಸಂಭ್ರಮವನ್ನು ಸವಿಯುತ್ತಿರುವುದು ಸಂತೋಷ ಎಂದು ತಿಳಿಸಿದರು.
ನಾಳೆ ವಿಜಯದಶಮಿಯಂದು ಜಂಬೂ ಸವಾರಿ ಇದೆ. ಮಧ್ಯಾಹ್ನ ನಂದಿಪೂಜೆಯ ನಂತರ ಜಂಬೂಸವಾರಿ ಪ್ರಾರಂಭವಾಗುತ್ತದೆ. ಇಂದು ನಾನು ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಮೈಸೂರು ನಗರದ ಸಿಟಿರೌಂಡ್ಸ್ ಮಾಡಿ ದೀಪಾಲಂಕಾರದ ವ್ಯವಸ್ಥೆಯನ್ನು ವೀಕ್ಷಿಸಲಿದ್ದೇನೆ ಎಂದು ಸಿದ್ದು ತಿಳಿಸಿದರು
ಬರಗಾಲದ ಕಾಮಗಾರಿಗಳು ಸಾಗುತ್ತಿದೆ. ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಹಾಗೂ ನೀರು ಪೂರೈಸಲು ಕ್ರಮ ಕೈಗೊಳ್ಳಲಾಗಿದೆ. ಕುಡಿಯುವ ನೀರಿಗೆ ತೊಂದರೆಯಾಗದಂತೆ ವ್ಯವಸ್ಥೆ ಮಾಡಲು ಹಾಗೂ ಮೇವು ಬೆಳೆಯಲು ಹಾಗೂ ಸಂಗ್ರಹಿಸಲು ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು
32000 ಮೆ.ವಾ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯ ವಿದ್ದರೂ ಕೂಡ , ಆ ಪ್ರಮಾಣದ ವಿದ್ಯುತ್ ಉತ್ಪಾದಿಸಲು ಸಾಧ್ಯವಾಗುತ್ತಿಲ್ಲ ಎಂದು ಟೀಕಿಸುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಆರೋಪ ಮಾಡುವುದು ಬಿಟ್ಟರೆ ಬೇರೆ ಏನೂ ತಿಳಿದಿಲ್ಲ ಎಂದು ಸಿಎಂ ಟಾಂಗ್ ನೀಡಿದರು
ಈ ಬಾರಿ ಮಳೆಯ ಅಭಾವದಿಂದಾಗಿ ರೈತರಿಂದ ವಿದ್ಯುತ್ ಬೇಡಿಕೆ ಹೆಚ್ಚಾಗಿದೆ. ಆದ್ದರಿಂದ ರೈತರಿಗೆ ಐದು ಗಂಟೆಗಳ ನಿರಂತರ ವಿದ್ಯುತ್ ಪೂರೈಕೆಗೆ ಆದೇಶ ನೀಡಲಾಗಿದೆ ಎಂದು ತಿಳಿಸಿದರು.

