ಯತ್ನಾಳ್  ದ್ವೇಷದ ರಾಜಕಾರಣಿ; ಮಹಾನ್ ಸುಳ್ಳುಗಾರ -ಸಿದ್ದರಾಮಯ್ಯ

ಬೆಳಗಾವಿ: ಬಸವನ ಗೌಡ ಪಾಟೀಲ್ ಯತ್ನಾಳ್  ಒಬ್ಬ ದ್ವೇಷದ ರಾಜಕಾರಣಿ, ಮಹಾನ್ ಸುಳ್ಳುಗಾರ, ಚುನಾವಣೆ ಗೆಲ್ಲಲು ಈ ರೀತಿ ಮಾತಾಡಬಾರದು ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ತೆಲಂಗಾಣಕ್ಕೆ ತೆರಳುವ ಮುನ್ನ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸಿಎಂ ಮಾತನಾಡಿದರು.

ಪೀರಾ ಮೌಲ್ವಿ  ಅವರ ಜೊತೆಗೆ ನನಗೆ ಬಹಳ ವರ್ಷಗಳ ಸಂಬಂಧ ಇದೆ. ಆಗೆಲ್ಲ ಯಾಕೆ ಅವರು ಸುಮ್ಮನಿದ್ದರು ಎಂದು ಕಾರವಾಗಿ ಪ್ರಶ್ನಿಸಿದರು.

ಪೀರಾ ಮೌಲ್ವಿ ಅವರು ಆರೋಪ ಸಾಬೀತು ಮಾಡಿ ಎಂದು ಹೇಳಿದ್ದಾರೆ. ಕೇಂದ್ರದಲ್ಲಿ ಅವರದ್ದೇ ಸರ್ಕಾರ ಇದೆಯಲ್ಲಾ ಸಾಬೀತು ಮಾಡಲಿ ಎಂದು ಸವಾಲು ಹಾಕಿದರು.

ಈಗ ಆರೋಪ ಮಾಡುತ್ತಿರುವ ಯತ್ನಾಳ್, ಅವರದ್ದೇ ಸರ್ಕಾರ ಇದ್ದಾಗ ಏನು ಮಾಡುತ್ತಿದ್ದರು, ಅವರು ಬಿಜೆಪಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದರು. ವಿರೋಧ ಪಕ್ಷದ ನಾಯಕನ ಸ್ಥಾನಕ್ಕೂ ಪ್ರಯತ್ನ ಮಾಡಿದ್ದರು. ಎರಡೂ ಸಿಗಲಿಲ್ಲ ಅದಕ್ಕೆ ಈಗ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದರು.

ದಕ್ಷಿಣ ಭಾರತದಲ್ಲಿ ಕಾಂಗ್ರೆಸ್ ವಿಸ್ತರಣೆ ಆಗುತ್ತಿದೆಯೆ ಎಂಬ ಪತ್ರಕರ್ತರ ಪ್ರಶ್ನೆಗೆ, ವಿಸ್ತರಣೆ ಅಲ್ಲ ದಕ್ಷಿಣ ಭಾರತದಲ್ಲಿ ಬಿಜೆಪಿಯೇ ಇಲ್ಲ ಎಂದು ಸಿಎಂ ತಿಳಿಸಿದರು.

ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಕಲ್ಯಾಣ ಯೋಜನೆಗಳಿಗೆ ಮೀಸಲಿಟ್ಟ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಂಡ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಎಂ, ಗೋವಿಂದ ಕಾರಜೋಳ ಅವರ ಕಾಲದಲ್ಲಿ ಎಸ್‍ಟಿಪಿ-ಟಿಎಸ್‍ಪಿ ಹಣ ಯಾಕೆ ಕಡಿಮೆ ಇತ್ತು ಎಂದು ಅವರೇ ಹೇಳಬೇಕು. ನಾನು ಕೊನೆಯ ಬಜೆಟ್ ಮಂಡಿಸಿದಾಗ 30 ಸಾವಿರ ಕೋಟಿ ರೂ. ಹಣ ಇತ್ತು. ಬಿಜೆಪಿ ಕಾಲದಲ್ಲಿ 25 ಸಾವಿರ ಕೋಟಿ ರೂ. ಆಯ್ತು, ಬಿಜೆಪಿಯವರು ಇದಕ್ಕೆ ಉತ್ತರಿಸಲಿ ಎಂದು ಆಗ್ರಹಿಸಿದರು.

ಎಸ್‍ಟಿಪಿ-ಟಿಎಸ್‍ಪಿ ಕಾಯ್ದೆಯಲ್ಲಿನ ಪರಿಶಿಷ್ಟರ ಕಲ್ಯಾಣಕ್ಕೆ ಮೀಸಲಿಟ್ಟ ಅನುದಾನ ಅನ್ಯ ಕಾರ್ಯಗಳಿಗೆ ವರ್ಗಾವಣೆಗೆ ಅವಕಾಶ ನೀಡುವ ಕಲಂ 7ಡಿಯನ್ನು ಹಿಂದೆ ಸಿಎಂ ಆಗಿದ್ದಾಗ ರದ್ದು ಮಾಡುತ್ತೇವೆ ಎಂದು ಹೇಳಿದ್ದೆ, ಆ ಕಲಂ ರದ್ದು ಮಾಡುತ್ತೇವೆ, ಈ ಬಗ್ಗೆ ಶೀಘ್ರ ಆದೇಶ ಹೊರಡಿಸುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು.