ಬೆಂಗಳೂರು,ಡಿ.8-ಕನ್ನಡ ಚಿತ್ರರಂಗದ ಹಿರಿಯ ಮೇರು ನಟಿ ಲೀಲಾವತಿ ಅವರು ವಯೋ ಸಹಜ ಕಾಯಿಲೆಯಿಂದ ನಿಧನ ಹೊಂದಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ 1938ರಲ್ಲಿ ಜನಿಸಿದ್ದ ಲೀಲಾವತಿ ಅವರು, ಸಣ್ಣ ವಯಸ್ಸಿನಲ್ಲೇ ರಂಗ ಭೂಮಿಯಲ್ಲಿ ತೊಡಗಿಸಿಕೊಂಡರು.
ಮೈಸೂರು ರಂಗಭೂಮಿಯಿಂದ ವೃತ್ತಿ ಜೀವನ ಆರಂಭಿಸಿದ್ದರು.
ವರನಟ ಡಾಕ್ಟರ್ ರಾಜಕುಮಾರ್ ಸೇರಿದಂತೆ ಸ್ಯಾಂಡಲ್ ವುಡ್ ಮೇರು ನಟರೊಂದಿಗೆ ಅಭಿನಯಿಸಿದ್ದರು.
ಕನ್ನಡ ಅಷ್ಟೇ ಅಲ್ಲಾ ತಮಿಳು, ತೆಲುಗು ಚಿತ್ರಗಳು ಸೇರಿದಂತೆ ಸುಮಾರು 650ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದು,ಅದರಲ್ಲಿ400 ಕನ್ನಡ ಚಿತ್ರಗಳಲ್ಲಿ ನಟಿಸಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.
ವಿಧಿವಿಲಾಸ,ರಣಧೀರ ಕಂಠೀರವ,ಕುಲವಧು,ಬೇವುಬೆಲ್ಲ ಹೀಗೆ ಸೂಪರ್ ಹಿಟ್ ಚಿತ್ರಗಳಲ್ಲಿ ಅವರು ನಟಿಸಿದ್ದಾರೆ.
ಚಂಚಲ ಕುಮಾರಿ ಎಂಬ ಚಿತ್ರದಲ್ಲಿ ಸಣ್ಣ ಪಾತ್ರದಲ್ಲಿ ನಟಿಸುವ ಅವಕಾಶ ಪಡೆದ ಲೀಲಾವತಿ ನಾಗ ಕನ್ನಿಕಾ,1958ರ ಭಕ್ತ ಪ್ರಹ್ಲಾದ, ಮಾಂಗಲ್ಯ ಯೋಗ, ಧರ್ಮ ವಿಜಯ ಹಾಗೂ ರಣಧೀರ ಕಂಠೀರವ ಚಿತ್ರಗಳಲ್ಲಿ ಪಾತ್ರಗಳನ್ನು ನಿರ್ವಹಿಸಿದ್ದರು.
ಮಹಾಲಿಂಗ ಭಾಗವತರ ಶ್ರೀ ಸಾಹಿತ್ಯ ಸಾಮ್ರಾಜ್ಯ ಡ್ರಾಮಾ ಕಂಪನಿಯಲ್ಲಿಯೂ ಕೆಲಸ ಮಾಡಿದ್ದ ಲೀಲಾವತಿ ಅವರು 1960ರಲ್ಲಿ ತೆರೆಗೆ ಬಂದಿದ್ದ ರಾಣಿ ಹೊನ್ನಮ್ಮ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕಿಯಾದರು.
ಲೀಲಾವತಿ ಅವರು ಹಲವು ಸಮಯಗಳಿಂದ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು ಆದರೂ ತಾವೇ ನಿಂತು ಕಟ್ಟಿಸಿದ್ದ ಪಶುವೈದ್ಯಕೀಯ ಆಸ್ಪತ್ರೆ ಉದ್ಘಾಟನೆಗೆ ಆಗಮಿಸಬೇಕೆಂದು ಇತ್ತೀಚಿಗೆ ಉಪಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ಅವರ ನಿವಾಸಕ್ಕೆ ಪುತ್ರನೊಂದಿಗೆ ಹೋಗಿದ್ದುದು ವಿಶೇಷ.
ತಕ್ಷಣ ಡಿ.ಕೆ.ಶಿವಕುಮಾರ್ ಕರಿನ ಬಳಿಗೆ ಬಂದು ಆರೋಗ್ಯ ಸರಿ ಇಲ್ಲದಿದ್ದರೂ ಇಷ್ಟು ದೂರ ಬಂದಿದ್ದೀರಿ ಎಂದು ಹೇಳಿ, ಲೀಲಾವತಿ ಅವರ ಕೈಹಿಡಿದು ಸಮಾಧಾನಪಡಿಸಿ ಆಸ್ಪತ್ರೆಗೆ ಬೇಕಾದ ನೆರವು ನೀಡುವುದಾಗಿ ಭರವಸೆ ನೀಡಿದ್ದರು ಉದ್ಘಾಟನೆ ನೆರವೇರಿಸುವುದಾಗಿ ತಿಳಿಸಿದ್ದರು.
ಕಳೆದವಾರವಷ್ಟೇ ಈ ಆಸ್ಪತ್ರೆ ಉದ್ಘಾಟನೆ ಕೂಡಾ ನೆರವೇರಿತ್ತು.
ಮೊನ್ನೆಯಷ್ಟೇ ಮುಖ್ಯ ಮಂತ್ರಿ ಸಿದ್ದರಾಮಯ್ಯ ಕೂಡಾ
ಲೀಲಾವತಿ ಅವರ ಮನೆಗೆ ಭೇಟಿ ನೀಡಿ ಆರೋಗ್ಯವಿಚಾರಿಸಿದ್ದರು.
ಆಸ್ಪತ್ರೆಗೆ ದಾಖಲಿಸಿ ಎಲ್ಲ ಖರ್ಚನ್ನು ನಾವೇ ನೋಡಿಕೊಳ್ಳುತ್ತೇವೆ ಎಂದು ಪುತ್ರ ವಿನೋದ್ ರಾಜ್ ಅವರಿಗೆ ಹೇಳಿ ಬಂದಿದ್ದರು.
ಕಳೆದ ವಾರ ನಟ ಶಿವರಾಜ್ ಕುಮಾರ್ ಅವರು ಪತ್ನಿ ಗೀತಾ ಅವರೊಂದಿಗೆ ಲೀಲಾವತಿ ಅವರ ನಿವಾಸಕ್ಕೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದರು.ಜತೆಗೆ ನಿಮ್ಮೊಂದೊಗೆ ನಾವಿದ್ದೇವೆ ಎಂದು ವಿನೋದ್ ರಾಜ್ ಅವರಿಗೆ ದೈರ್ಯ ತುಂಬಿದ್ದರು.
ನಟಿ ಲೀಲಾವತಿ ಅವರು ಶುಕ್ರವಾರ ಸಂಜೆ ನೆಲಮಂಗಲದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಹಲವು ಸಮಯಗಳಿಂದ ವಯೋ ಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಲೀಲಾವತಿ ಅವರು, ತಮ್ಮ 87ನೇ ವರ್ಷದಲ್ಲಿ ಜೀವನ ಪಯಣ ಮುಗಿಸಿದ್ದಾರೆ.
ಲೀಲಾವತಿ ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಆಸ್ಪತ್ರೆಗೆ ನಟರುಗಳಾದ ಶಿವರಾಜಕುಮಾರ್,ಅರುಣ್ ಸಾಗರ್ ಮತ್ತಿತರರು ಭೇಟಿ ನೀಡಿದರು.
ಸಂತಾಪ- ಹಿರಿಯ ನಟಿ ಲೀಲಾವತಿಯವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಪ್ರಧಾನಿ ಎಚ್. ಡಿ ದೇವೇಗೌಡ ಸೇರಿದಂತೆ ಅನೇಕ ಸಚಿವರು ರಾಜಕೀಯ ಮುಖಂಡರು, ಚಿತ್ರರಂಗದ ಗಣ್ಯರು ಅಭಿಮಾನಿಗಳು ಸಂತಪ ವ್ಯಕ್ತಪಡಿಸಿದ್ದಾರೆ.

