ಭೂಗತ ಪಾತಕಿ ದಾವೂದ್ ಇಬ್ರಾಹಿಂ ಆಸ್ಪತ್ರೆಗೆ: ವಿಷಪ್ರಾಶನ ಶಂಕೆ

ಕರಾಚಿ(ಪಾಕಿಸ್ತಾನ): ಭೂಗತ ಪಾತಕಿ ದಾವೂದ್ ಇಬ್ರಾಹಿಂನನ್ನು ಪಾಕಿಸ್ತಾನದ ಕರಾಚಿಯ ಆಸ್ಪತ್ರೆಗೆ ದಾಖಲಿಸಲಾಗಿದ್ದು ಆಸ್ಪತ್ರೆ ಸುತ್ತಮುತ್ತ ಭಾರೀ ಭದ್ರತೆ ಮಾಡಲಾಗಿದೆ.

ಕ್ರಿಮಿನಲ್ ಚಟುವಟಿಕೆಗಳ ರೂವಾರಿ  ದಾವೂದ್ ಇಬ್ರಾಹಿಂಗೆ ವಿಷಪ್ರಾಶನ ಮಾಡಲಾಗಿದೆ. ಇದರಿಂದ ಹಠಾತ್ ಆರೋಗ್ಯ ಕೆಟ್ಟು ಆಸ್ಪತ್ರೆಗೆ ದಾಖಲಾಗಿದ್ದಾನೆ ಎಂದು ಹೇಳಲಾಗುತ್ತಿದೆ. 

ಕಳೆದ ಎರಡು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದು, ವಿಷಪ್ರಾಶನವಾಗಿರಬಹುದು ಎಂಬ ಊಹಾಪೋಹಗಳಿಗೆ ಪುಷ್ಟಿ ನೀಡಿದೆ.

ಸದ್ಯಕ್ಕೆ, ಆಸ್ಪತ್ರೆಯಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ. ದಾವೂದ್ ಇಬ್ರಾಹಿಂ ನನ್ನು ಆಸ್ಪತ್ರೆಯ ಮಹಡಿಯಲ್ಲಿ ಪ್ರತ್ಯೇಕವಾಗಿ ಇಟ್ಟು ಚಿಕಿತ್ಸೆ ಕೊಡಲಾಗುತ್ತಿದ್ದು, ಆಸ್ಪತ್ರೆಯ ಉನ್ನತ ಅಧಿಕಾರಿಗಳು ಮತ್ತು ಆತನ ಹತ್ತಿರದ ಕುಟುಂಬ ಸದಸ್ಯರನ್ನು ಮಾತ್ರ ಒಳ ಬಿಡಲಾಗಿದೆ.

ಭಾರತಕ್ಕೆ ಮೋಸ್ಟ್ ವಾಂಟೆಡ್ ಭೂಗತ ಪಾತಕಿಯಾಗಿರುವ ದಾವೂದ್ ಇಬ್ರಾಹಿಂಗಾಗಿ ಮುಂಬೈ ಪೊಲೀಸರು ಆತನ ಸಂಬಂಧಿಕರಾದ ಅಲಿಶಾ ಪಾರ್ಕರ್ ಮತ್ತು ಸಾಜಿದ್ ವಾಗ್ಲೆ ಅವರಿಂದ ಹೆಚ್ಚಿನ ಮಾಹಿತಿ ಪಡೆಯಲು ಪ್ರಯತ್ನಿಸುತ್ತಿದ್ದಾರೆ.

ಮುಂಬೈನಲ್ಲಿ 1993ರಲ್ಲಿ ಸಂಭವಿಸಿದ್ದ ಸರಣಿ ಬಾಂಬ್ ಸ್ಫೋಟ ಸ್ಫೋಟದಲ್ಲಿ 250 ಕ್ಕೂ ಹೆಚ್ಚು ಅಮಾಯಕ ನಾಗರಿಕರು ಮೃತಪಟ್ಟು, 750ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದರು.

ಭೀಕರ ಮುಂಬೈ ಸ್ಫೋಟದ ಮಾಸ್ಟರ್ ಮೈಂಡ್ ದಾವೂದ್ ಇಬ್ರಾಹಿಂ.ಅಲ್ಲಿಂದ ಆತ ಭಾರತಕ್ಕೆ ಬೇಕಾದ ಮೋಸ್ಟ್ ವಾಂಟೆಂಡ್ ಕ್ರಿಮಿನಲ್ ಎನಿಸಿಕೊಂಡಿದ್ದಾನೆ.ಆದರೆ ಈವರೆಗೆ ಈತ ಸೆರೆಸಿಕ್ಕಿಲ್ಲ.