ಐಸಿಸ್ ಉಗ್ರರ ನಂಟು: ಎನ್‌ಐಎ ಭರ್ಜರಿ ಭೇಟೆ; 6 ಮಂದಿ ಅರೆಸ್ಟ್

ಬೆಂಗಳೂರು: ಐಸಿಸ್‌ ಉಗ್ರರ ಜೊತೆಗಿನ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ ಬೆಂಗಳೂರು  ಸೇರಿದಂತೆ 4 ರಾಜ್ಯಗಳ ಸುಮಾರು 20 ಸ್ಥಳಗಳಲ್ಲಿ ದಾಳಿ ನಡೆಸಿದೆ.

ಕರ್ನಾಟಕದ 11 ಸ್ಥಳಗಳು, ಜಾರ್ಖಂಡ್‌ನ 4, ಮಹಾರಾಷ್ಟ್ರದ 3 ಮತ್ತು ದೆಹಲಿಯ 1 ಸ್ಥಳಗಳಲ್ಲಿ ಅಧಿಕಾರಿಗಳ ತಂಡ ದಾಳಿ ನಡೆಸಿದೆ.

ಬೆಂಗಳೂರಿನ ಆರ್‌.ಸಿ ನಗರ, ಹೆಬ್ಬಾಳ, ಪುಲಿಕೇಶಿ ನಗರ, ಶಿವಾಜಿ ನಗರ, ಜೆ.ಸಿ. ನಗರದ ಚಿನ್ನಪ್ಪ ಗಾರ್ಡನ್ ಸೇರಿದಂತೆ ಹಲವು ಕಡೆ ದಾಳಿ ನಡೆಸಿ ತಪಾಸಣೆ ನಡೆಸುತ್ತಿದೆ.

ಬಳ್ಳಾರಿಯಲ್ಲಿಯೂ ಒಟ್ಟು 9 ತಂಡಗಳು ಕಾರ್ಯಾಚರಣೆ ನಡೆಸಿವೆ.

ಸೋಮವಾರ ಮುಂಜಾನೆಯಿಂದಲೇ ಬಳ್ಳಾರಿಯಲ್ಲಿ ಎನ್‌ಐಎ ಕಾರ್ಯಾಚರಣೆ  ಸಾಗಿದೆ.

ನಿಷೇಧಿತ ಪಿಎಫ್‌ಐನ 7 ಮಂದಿಯ ಮನೆಗಳ ಮೇಲೆ ದಾಳಿ ನಡೆಸಿ‌ ಪರಿಶೀಲಿಸಲಾಗುತ್ತಿದೆ.

ದಾಳಿಯಲ್ಲಿ ಬಳ್ಳಾರಿಯ ಶಮೀವುಲ್ಲಾ, ಅಜಾಜ್ ಅಹಮದ್, ಸುಲೇಮಾನ್, ತಬ್ರೇಜ್, ನಿಖಿಲ್ ಅಲಿಯಾಸ್‌ ಸೂಫಿಯಾನ್, ಮುಜಾಮಿಲ್ ಎಂಬವರನ್ನ ಬಂಧಿಸಲಾಗಿದೆ.

ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಬಾಡಿಗೆ ಮನೆ ಪಡೆದು ವಾಸವಿದ್ದ ಬಳ್ಳಾರಿಯ ಶಮಿವುಲ್ಲ ಬಳಿ ಸ್ಫೋಟಕ ತಯಾರಿಕೆಗೆ ಬಳಸುವ 7 ಕೆಜಿ ಸೋಡಿಯಂ ನೈಟ್ರೇಟ್‌  ವಶಪಡಿಸಿಕೊಳ್ಳಲಾಗಿದೆ.

ಅಫ್ಘಾನಿಸ್ತಾನಕ್ಕೆ ಹೋಗಿ ಕಾನೂನುಬಾಹಿರ ಚಟುವಟಿಕೆ ನಡೆಸಲು ಯತ್ನಿಸಿದ್ದಾರೆ ಎಂಬ ಅನುಮಾನದ ಮೇರೆಗೆ ಪಿಎಫ್‌ಐ ಮಾಜಿ ಪ್ರಧಾನ ಕಾರ್ಯದರ್ಶಿ ಸುಲೇಮಾನ್ ಮನೆಯಲ್ಲೂ ಅಧಿಕಾರಿಗಳು ಶೋಧ ನಡೆಸಿದ್ದಾರೆ.

ಇತ್ತೀಚೆಗೆ ದೇಶದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸುತ್ತಿದ್ದ ಹಾಗೂ ಯುವಕರನ್ನು ಐಸಿಸ್‌ ಭಯೋತ್ಪಾದನಾ ಸಂಘಟನೆಗೆ ಸೇರಿಸುತ್ತಿದ್ದ ಮಾಹಿತಿ ಮೇರೆಗೆ ಎನ್ಐಎ ಅಧಿಕಾರಿಗಳು ದೇಶದ 40 ಕಡೆ ದಾಳಿ ನಡೆಸಿದ್ದರು.‌

ಬೆಂಗಳೂರಿನಲ್ಲೂ ದಾಳಿ ನಡೆಸಿ 15 ಮಂದಿಯನ್ನ ಬಂಧಿಸಲಾಗಿತ್ತು. ಈ ಪೈಕಿ ಒಬ್ಬ ಐಸಿಸ್ ಮಾಡ್ಯೂಲ್‌ನ ನಾಯಕನಾಗಿದ್ದ. ಹೊಸದಾಗಿ ಸೇರ್ಪಡೆಗೊಂಡವರಿಗೆ ನಿಷ್ಠೆಯ ಪ್ರಮಾಣ ವಚನ ಬೋಧಿಸುತ್ತಿದ್ದ ಎಂಬುದು ಗೊತ್ತಾಗಿದೆ.