ಬೆಂಗಳೂರು, ಡಿ.21: ಕೋವಿಡ್ ವೈರಸ್ ತಗುಲಿದವರಿಗೆ ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಸೇರಿ ಯಾವುದೇ ಸೌಲಭ್ಯ ಗಳಿಗೆ ಕೊರತೆ ಆಗಬಾರದು ಎಂಬುದಾಗಿ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ವಿಧಾನಸೌಧದಲ್ಲಿಂದು ಹಮ್ಮಿಕೊಂಡಿದ್ದ ಕೋವಿಡ್ ಕುರಿತ ಉನ್ನತ ಮಟ್ಟದ ಸಭೆ ಬಳಿಕ ಸಿದ್ದರಾಮಯ್ಯ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಈಗಿನ ಉಪತಳಿ JN.1 (ಒಮಿಕ್ರಾನ್ ಉಪತಳಿ) ಅಪಾಯಕಾರಿಯಲ್ಲ,
ಈ ಉಪತಳಿ ರಾಜ್ಯದಲ್ಲಿ 92 ಪತ್ತೆಯಾಗಿದೆ. ಬೆಂಗಳೂರಲ್ಲಿ 80 ಪತ್ತೆಯಾಗುದೆ,ಅದರಲ್ಲಿ 20 ಮಂದಿ ಮಾತ್ರ ಆಸ್ಪತ್ರೆಯಲ್ಲಿದ್ದಾರೆ ಎಂದು ತಿಳಿಸಿದರು.
20 ರಲ್ಲಿ 7 ಮಂದಿ ಐಸಿಯು ನಲ್ಲಿದ್ದಾರೆ. ಆದರೆ ಇವರಿಗೆ ಇತರೆ ಆರೋಗ್ಯ ಸಮಸ್ಯೆಗಳಿರುವುದರಿಂದ ಅಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ ಎಂದು ಹೇಳಿದರು.
ಪ್ರತಿದಿನ 5000 ಟೆಸ್ಟ್ ಗಳು ನಡೆಯುತ್ತವೆ. ಬೆಂಗಳೂರಲ್ಲೇ ಸಾವಿರ ಪರೀಕ್ಷೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಕ್ಯಾಬಿನೆಟ್ ಉಪಸಮಿತಿ ರಚಿಸಲಾಗುವುದು, ಇವರು ಸಲಹಾ ಸಮಿತಿ ಜತೆ ಸಂಪರ್ಕದಲ್ಲಿದ್ದು ನಿರಂತರ ನಿಗಾ ಇಡಬೇಕು,ಹಿಂದಿನ ಸರ್ಕಾರದ ಅವಧಿಯಲ್ಲಾದ ತಪ್ಪುಗಳು ಮರುಕಳಿಸಬಾರದು ಎಂದು ಸೂಚಿಸಿದ್ದೇನೆ ಎಂದು ಸಿಎಂ ಹೇಳಿದರು.
ತತ್ರಿಕ ಸಲಹಾ ಸಮಿತಿ ಸಲಹೆಗಳನ್ನು ಪೂರ್ತಿಯಾಗಿ ಜಾರಿ ಮಾಡಬೇಕು,
ಗಡಿ ಜಿಲ್ಲೆಗಳಲ್ಲಿ ಹೆಚ್ಚೆಚ್ಚು ಪರೀಕ್ಷೆ ಮಾಡಬೇಕು,ಆತಂಕ ಪಡುವ ಅಗತ್ಯವಿಲ್ಲ ಎಚ್ಚರಿಕೆಯಿಂದ ಇದ್ದರೆ ಸಾಕು ಎಂದು ಸಿದ್ದರಾಮಯ್ಯ ತಿಳಿಸಿದರು.
ಜನಸಂದಣಿಯಲ್ಲಿ ಮಾಸ್ಕ್ ಧರಿಸಬೇಕು. 60 ವರ್ಷ ಮೇಲ್ಪಟ್ಟವರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು,ಈಗಲೇ ಎಲ್ಲರೂ ಮಾಸ್ಕ್ ಧರಿಸುವ ಅಗತ್ಯವಿಲ್ಲ ಎಂಬ ಸಲಹೆ ತಾಂತ್ರಿಕ ಸಲಹಾ ಸಮಿತಿ ಮತ್ತು ತಜ್ಞರಿಂದ ಬಂದಿದೆ ಎಂದು ಹೇಳಿದರು.
ಡೆಡಿಕೇಟೆಡ್ ಆಸ್ಪತ್ರೆಗಳಲ್ಲಿ ಸಕಲ ಸಿದ್ದತೆ ಇರುತ್ತವೆ. ಎಲ್ಲಾ ಜಿಲ್ಲೆಗಳಲ್ಲೂ ಆಕ್ಸಿಜನ್, ಬೆಡ್, ವೆಂಟಿಲೇಟರ್ ಸೇರಿ ಕೋವಿಡ್ ಸಂಬಂಧಿತ ಎಲ್ಲವನ್ನೂ ವ್ಯವಸ್ಥೆ ಮಾಡಿಕೊಳ್ಳಬೇಕು,ಲಸಿಕೆಗಳನ್ನು ಸಿದ್ದವಿಟ್ಟುಕೊಳ್ಳಲು ಸೂಚಿಸಲಾಗಿದೆ ಎಂದು ಹೇಳಿದರು.
ಮಾಧ್ಯಮದವರು, ಚಾನಲ್ ನವರು ಅನಗತ್ಯ ಪ್ಯಾನಿಕ್ ಸೃಷ್ಟಿಸಬಾರದು. ಆತಂಕ ಪಡಬೇಕಾದ ಸಂದರ್ಭವೇ ಬಂದಿಲ್ಲ. ಪ್ಯಾನಿಕ್ ಸೃಷ್ಟಿಸಬೇಡಿ ಎಂದು ಮಾಧ್ಯಮಗಳಿಗೆ ಸಿಎಂ ಮನವಿ ಮಾಡಿದರು.
ಸಾಕಷ್ಟು ಹಣ ಇದೆ. ಕೋವಿಡ್ ನಿರ್ವಹಣೆಗೆ ಹಣಕಾಸಿಗೆ ಕೊರತೆ ಇಲ್ಲ,
ಪರಿಸ್ಥಿತಿ ನೋಡಿಕೊಂಡು ಡೆಡಿಕೇಡೆಡ್ ಆಸ್ಪತ್ರೆಗಳನ್ನು ನಿಗಧಿ ಮಾಡುತ್ತೇವೆ ಎಂದು ಸಿದ್ದರಾಮಯ್ಯ ತಿಳಿಸಿದರು.

