ಮೋದಿ ಭೇಟಿ ಮಾಡಿದ ಹೆಚ್ ಡಿ ಡಿ,ಹೆಚ್ ಡಿ ಕೆ:ರಾಜ್ಯ ರಾಜಕೀಯ ಪರಿಸ್ಥಿತಿ ಕುರಿತು ಚರ್ಚೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಸಂಸತ್‌ ಭವನದ ಪ್ರಧಾನಿಗಳ ಕಾರ್ಯಾಲಯದಲ್ಲಿ ಭೇಟಿ ಮಾಡಿದರು.

ಗುರುವಾರ ಬೆಳಗ್ಗೆ ಪ್ರಧಾನಿಗಳ ಕಾರ್ಯಾಲಯಕ್ಕೆ ಮಾಜಿ ಪ್ರಧಾನಿಗಳು, ಮಾಜಿ ಮುಖ್ಯಮಂತ್ರಿಗಳು ಆಗಮಿಸಿದರು. ಇಬ್ಬರು ನಾಯಕರ ಜತೆ ಪ್ರಧಾನಿಗಳು ವಿವಿಧ ವಿಷಯಗಳ ಬಗ್ಗೆ ಮಾತುಕತೆ ನಡೆಸಿದರು.

ರಾಜ್ಯ ರಾಜಕೀಯ ಪರಿಸ್ಥಿತಿಯ ಜತೆಗೆ ಕೊಬ್ಬರಿ ಖರೀದಿ, ಕಾಡುಗೊಲ್ಲ ಜಾತಿಗೆ ಮೀಸಲಾತಿ ಸೌಲಭ್ಯ‌ ಹಾಗೂ ರಾಜ್ಯದ ನೀರಾವರಿ ಯೋಜನೆಗಳ ಬಗ್ಗೆ ಮಾಜಿ ಪ್ರಧಾನಿಗಳು ಮೋದಿ ಅವರ ಜತೆ ಚರ್ಚೆ ನಡೆಸಿದರು ಎಂದು ಪ್ರಧಾನಿ ಭೇಟಿ ನಂತರ ಎಚ್.ಡಿ.ಕುಮಾರಸ್ವಾಮಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಇದೇ ವೇಳೆ ಕೊಬರಿಗೆ ಬೆಂಬಲ ಬೆಲೆ ನೀಡುವುದು ಹಾಗೂ ನಾಫೆಡ್‌ ಮೂಲಕ ಖರೀದಿ ಮಾಡಬೇಕು ಎಂಬ ಬಗ್ಗೆ ಪ್ರಧಾನಿಗಳಿಗೆ ಮನವಿ ಪತ್ರ ಸಲ್ಲಿಸಿದ್ದೇವೆ,
ಈ ಬಗ್ಗೆ ಪ್ರಧಾನಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಹೇಳಿದರು.

ನಿಖಿಲ್‌ ಕುಮಾರಸ್ವಾಮಿ ಅವರು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಾರಾ ಎಂಬ ಪ್ರಶ್ನೆಗೆ, ನಿಖಿಲ್ ಅವರು ಎಲ್ಲಾ 28 ಲೋಕಸಭಾ ಕ್ಷೇತ್ರಗಳಲ್ಲಿಯೂ ಪ್ರಚಾರ ಮಾಡುತ್ತಾರೆ ಎಂದು ಉತ್ತರಿಸಿದರು.

ಯಾವುದೇ ಕಾರಣಕ್ಕೂ ಅವರು ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ. ಆದರೆ, ಜನರು ಚುನಾವಣೆಗೆ ನಿಲ್ಲಲಿ ಎಂದು ಕಾರ್ಯಕರ್ತರು ಹೇಳುತ್ತಿದ್ದಾರೆ. ಮಂಡ್ಯ ಕ್ಷೇತ್ರದಿಂದಲೇ ಕಣಕ್ಕೆ ಇಳಿಯಲಿ ಎಂದು ಬಯಸುತ್ತಿದ್ದಾರೆ. ಎರಡು ಬಾರಿ ಅವರು ಸೋತಿದ್ದಾರೆ. ಹೀಗಾಗಿ ಜನರ ಅನುಕಂಪವೂ ಇದೆ. ಆದರೆ, ಅವರಿಗೆ ಸ್ಪರ್ಧೆ ಮಾಡುವ ಉದ್ದೇಶವಿಲ್ಲ ಎಂದು ಸ್ಪಷ್ಟಪಡಿಸಿದರು.

ಜೆಡಿಎಸ್‌ ಮತ್ತು ಬಿಜೆಪಿ ನಡುವೆ ಕ್ಷೇತ್ರ ಹಂಚಿಕೆ ವಿಚಾರದಲ್ಲಿ ಯಾವುದೇ ಸಮಸ್ಯೆ, ಗೊಂದಲ ಇಲ್ಲ. ಯಾವ ಯಾವ ಕ್ಷೇತ್ರದಲ್ಲಿ ಯಾರು ಯಾರು ಸ್ಪರ್ಧೆ ಮಾಡುತ್ತಾರೆ ಎನ್ನುವುದನ್ನು ನಾವೇ ಪರಸ್ಪರ ಕೂತು ಅಂತಿಮಗೊಳಿಸುತ್ತೇವೆ ಎಂದು ಹೇಳಿದರು.

ಕುಮಾರಸ್ವಾಮಿ ಅವರು ಸೆಂಟ್ರಲ್ ಮಿನಿಸ್ಟರ್ ಆಗ್ತಾರಾ ಎಂಬ ಮಾಧ್ಯಮಗಳ ಪ್ರಶ್ನೆಗೆ, ಯಾರ ಹಣೆಯ ಮೇಲೆ ಏನ್ ಬರೆದಿದೆಯೋ ಅಂತ ಗೊತ್ತಿಲ್ಲಾ, ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು ಕಾದು ನೋಡೋಣ ಮುಂದೆ ಏನೇನು ನಡೆಯುತ್ತೋ ಎಂದು ಕುಮಾರಸ್ವಾಮಿ ಮಾರ್ಮಿಕವಾಗಿ ನುಡಿದರು.

ಕರ್ನಾಟಕದಲ್ಲಿ ರಾಜಕೀಯ ಪರಿಸ್ಥಿತಿ ಹಾಗೂ ಲೋಕಸಭೆ ಚುನಾವಣೆಯ ನಂತರ ರಾಜ್ಯ ಕಾಂಗ್ರೆಸ್ ಸರಕಾರ ಉರುಳುತ್ತಾ ಎಂಬ ಪ್ರಶ್ನೆಗೆ ಕರ್ನಾಟದ ರಾಜಕೀಯದಲ್ಲಿ ಶಿಂಧೆಯೂ ಇದ್ದಾರೆ, ಅಜೀತ್ ಪವಾರ್ ಸಹಾ ಇದ್ದಾರೆ. ಯಾರು ಮೊದಲು ಮುಂದೆ ಬರುತ್ತಾರೋ ಕಾದು ನೋಡಬೇಕು. ಸದ್ಯದ ಪರಿಸ್ಥಿತಿಯಲ್ಲಿ ಏನು ಬೇಕಾದರೂ ಆಗಬಹುದು ಎಂದು ಮಾರ್ಮಿಕವಾಗಿ ಉತ್ತರಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರನ್ನು ದೇವೇಗೌಡರು, ನಾನು, ಪ್ರಜ್ವಲ್, ರೇವಣ್ಣ, ಬಾಲಕೃಷ್ಣ ಭೇಟಿ ಮಾಡಿದ್ದೆವು. ಪ್ರತ್ಯೇಕವಾಗಿ ಪ್ರಧಾನಿಗಳ ಜತೆ ದೇವೇಗೌಡರು ಮತ್ತು ನಾನು ಬಹಳಷ್ಟು ವಿಚಾರಗಳ ಬಗ್ಗೆ ಚರ್ಚೆ ಮಾಡಿದೆವು. ಮೋದಿ ಅವರು ದೇವೇಗೌಡರ ಬಗ್ಗೆ ಅಪಾರ ಗೌರವ ಹೊಂದಿದ್ದಾರೆ. ಮೋದಿಯವರು ನಮ್ಮ ಕುಟುಂಬದ ಬಗ್ಗೆ ಇಟ್ಟಿರುವ ವಿಶ್ವಾಸ ಇವತ್ತಿಗೂ ಕಡಿಮೆಯಾಗಿಲ್ಲ,ಎಂದು ಸಂತಸ ವ್ಯಕ್ತಪಡಿಸಿದರು.

ಸಂಸತ್ ಭವನದಲ್ಲಿ ಯುವಕರು ಹೊಗೆ ಬಿಟ್ಟ ಪ್ರಕರಣವನ್ನೇ ದೊಡ್ಡದು ಮಾಡಿ ಕಾಂಗ್ರೆಸ್‌ ಪಕ್ಷ ಸಂಸತ್‌ ಕಲಾಪವನ್ನು ಹಾಳು ಮಾಡುತ್ತಿರುವುದು ಸರಿಯಲ್ಲ ಎಂದು ಇದೇ ವೇಳೆ ಎಚ್ ಡಿ ಕೆ ಟೀಕಿಸಿದರು.