ಬೆಂಗಳೂರು: ಹಿಜಬ್ ನಿಷೇಧ ಆದೇಶ ವಾಪಸ್ ಮಾಡುವ ವಿಚಾರದ ಕುರಿತು ಇನ್ನೂ ಚರ್ಚೆಯೇ ಆಗಿಲ್ಲ, ಈ ಬಗ್ಗೆ ನಾವು ಯೋಚನೆಯನ್ನೇ ಮಾಡಿಲ್ಲ, ನೀವೇ ಅದನ್ನ ದೊಡ್ಡದು ಮಾಡುತ್ತಿದ್ದೀರಿ ಎಂದು ಡಿಸಿಎಂ ಡಿ. ಕೆ.ಶಿವಕುಮಾರ್ ಮಾಧ್ಯಮದವರಿಗೆ ಹೇಳಿದರು.
ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಹಿಜಬ್ ನಿಷೇಧ ಆದೇಶ ವಾಪಸ್ ಮಾಡುವ ವಿಚಾರದ ಕುರಿತು ಇನ್ನೂ ಚರ್ಚೆಯೇ ಆಗಿಲ್ಲ. ನೀವೇ ಅದನ್ನ ದೊಡ್ಡದು ಮಾಡುತ್ತಿದ್ದೀರಿ ಎಂದರು.
ಸಿಎಂ ಸಿದ್ದರಾಮಯ್ಯ ಅವರೇ ಹೇಳಿಕೆ ಕೊಟ್ಟಿದ್ದಾರಲ್ಲಾ ಎಂದು ಕೇಳಿದ್ದಕ್ಕೆ, ಚರ್ಚೆಗೆ ಬರ್ತಿದೆ ಅಂತಾ ಹೇಳಿದ್ದಾರೆ ಅಷ್ಟೇ ಅಂತಹ ಯಾವ ವಿಚಾರ ಇಲ್ಲ ಎಂದು ಡಿಸಿಎಂ ಸ್ಪಷ್ಟಪಡಿಸಿದರು.
ಎರಡು ದಿನಗಳ ಹಿಂದೆ ಮೈಸೂರಿನಲ್ಲಿ ಮಾತನಾಡಿದ್ದ ಸಿದ್ದರಾಮಯ್ಯ, ಉಡುಪು ಅವರವರ ಇಷ್ಟ ಹಿಜಬ್ ನಿಷೇಧ ವಾಪಸ್‍ಗೆ ಹೇಳಿದ್ದೀನಿ ಹಿಜಬ್ ಧರಿಸಿ ಶಾಲಾ-ಕಾಲೇಜುಗಳಿಗೆ, ಪರೀಕ್ಷೆ ಬರೆಯಲು ಹೋಗಬಹುದು ಎಂದು ಹೇಳಿದ್ದರು.
ಸಿಎಂ ಅವರ ಈ ಹೇಳಿಕೆಗೆ ರಾಜ್ಯಾದ್ಯಂತ ಭಾರೀ ಖಂಡನೆ ವ್ಯಕ್ತವಾಗಿತ್ತು. ಸಿಎಂ ವಿರುದ್ಧ ಬಿಜೆಪಿಗರು ಕಿಡಿಕಾರಿದ್ದರು.
ಇದರ ಬೆನ್ನಲ್ಲೇ ಸಿಎಂ ಸ್ಪಷ್ಟನೆ ನೀಡಿ ಹಿಜಬ್ ನಿಷೇಧ ವಾಪಸ್ ಕುರಿತು ಚರ್ಚೆ ಆಗಬೇಕು ಎಂದು ತಿಳಿಸಿದ್ದರು.
ಆದರೆ ಇಷ್ಟೆಲ್ಲಾ ಆದರೂ ಮೌನವಾಗಿದ್ದ ಡಿ.ಕೆ.ಶಿವಕುಮಾರ್ ಇಂದು ಮೌನ ಮುರಿದು ಸ್ಪಷ್ಟನೆ ನೀಡಿದ್ದಾರೆ.

