ಬೆಂಗಳೂರು: ಎಲ್ಲಾ ಅಂಗಡಿ, ಮುಂಗಟ್ಟುಗಳು ಮಾಲ್ ಗಳು, ಉದ್ಯಮಗಳು ಕನ್ನಡ ನಾಮಫಲಕ ಹಾಕಬೇಕು ಮತ್ತು ಕನ್ನಡದಲ್ಲಿ ವ್ಯವಹರಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಹಲವು ಕನ್ನಡ ಪರ ಸಂಘಟನೆಗಳು ಇಂದು ಭಾರೀ ಪ್ರತಿಭಟನೆ ನಡೆಸಿದ್ದು ತೀವ್ರ ಸ್ವರೂಪ ಪಡೆದುಕೊಂಡಿತು.

ಬೆಂಗಳೂರಿನ ಎಂಜಿ ರಸ್ತೆ, ಬ್ರಿಗೆಡ್ ರಸ್ತೆ,ಮಾಲ್ ಆಫ್ ಏಷ್ಯ,ಚಿಕ್ಕಜಾಲ,ಸಾದಹಳ್ಳಿ ಸೇರಿದಂತೆ ವಿವಿಧೆಡೆ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಈ ವೇಳೆ ಆಂಗ್ಲ ಭಾಷೆಯಲ್ಲಿ ಇದ್ದ ಬೋರ್ಡ್ ಗಳನ್ನು ಕಿತ್ತು ಹಾಕಿದರಲ್ಲದೆ ಕಪ್ಪು ಮಸಿ ಬಳಿದರು,ಮತ್ತೆ ಕೆಲವೆಡೆ ಕಾರ್ಯಕರ್ತರೇ ಮುನ್ನುಗ್ಗಿ ಬೋರ್ಡ್ ಗಳನ್ನು ಕಿತ್ತುಬಿಸಾಡಿದರು.ಕೆಲವು ಮಳಿಗೆಗಳಿಗೆ ಕಲ್ಲು ತೂರಿದರು.
ಸಾದಹಳ್ಳಿ,ಚಿಕ್ಕಜಾಲ ಬಳಿ ಪರಿಸ್ಥಿತಿ ವಿಕೋಪಕ್ಕೆ ಹೋಯಿತು.ಕರವೇ ಅಧ್ಯಕ್ಷ ಟಿ.ಎ.ನಾರಾಯಣಗೌಡ ಮತ್ತಿತರರ ಬಂಧನ ವಿಷಯ ತಿಳಿಯುತ್ತಿದ್ದಂತೆ ಕಾರ್ಯಕರ್ತರು ತೀವ್ರ ರೋಷಗೊಂಡರು.
ಒಂದು ಹಂತದಲ್ಲಿ ಪೊಲೀಸರು ಮತ್ತು ಕರವೇ ಕಾರ್ಯಕರ್ತರ ನಡುವೆ ಜೋರು ಮಾತಿನ ಚಕಮಕಿ ನಡೆಯಿತು.
ಕೆಲವೆಡೆ ಮಳಿಗೆಗಳ ಸಿಬ್ಬಂದಿ ಪ್ರತಿಭಟನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದರು. ಮಾತಿನ ಚಕಮಕಿ ನಡೆಸಿದರು.
ಬೇರೆ ಭಾಷೆಯಲ್ಲಿದ್ದ ಬೋರ್ಡ್ ಗಳನ್ನು ಕಿತ್ತುಹಾಕಿದರು. ಸಾದಹಳ್ಳಿಯ ಬ್ಲೂಮ್ ಹೊಟೇಲ್ ಬಳಿ ಲೈಟಿಂಗ್ ಬೋರ್ಡ್ ಧ್ವಂಸಗೊಳಿಸಿದರು.ದೇವನಹಳ್ಳಿ,ಯುಬಿ ಸಿಟಿ,ಲ್ಯಾವೆಲ್ಲಿ ರಸ್ತೆಯಲ್ಲಿ ನಾಮಫಲಕಗಳನ್ನು ಪುಡಿಗಟ್ಟಿದರು.
ಪೊಲೀಸರು ಕರವೇ ಕಾರ್ಯಕರ್ತರನ್ನು ಯಡೆಯಲು ಹರಸಾಹಸ ಪಟ್ಟರು.
ಬಂಧನದ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಟಿ.ಎ.ನಾರಾಯಣಗೌಡ, ಇದು ಕನ್ನಡ ನಾಡು ಕನ್ನಡ ಭಾಷೆಯನ್ನೇ ಬಳಸಬೇಕು ಎಂದು ಹೇಳಿದರು.
ಬೇರೆ ಭಾಷಿಗರು ವ್ಯಾಪಾರ ಮಾಡಲಿ ಅದಕ್ಕೆ ನಾವು ಅಡ್ಡಿ ಮಾಡುವುದಿಲ್ಲ.ಆದರೆ ಕನ್ನಡದಲ್ಲೇ ವ್ಯವಹರಿಸಬೇಕು,ಕನ್ನಡ ಭಾಷೆ ಕಲಿಯಬೇಕು ಇಲ್ಲದಿದ್ದರೆ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಮುಖ್ಯ ಮಂತ್ರಿ ಸಿದ್ದರಾಮಯ್ಯ ನವರಿಗೂ ಎಚ್ಚರಿಕೆ ಕೊಡುತ್ತಿದ್ದೇವೆ ಹೋರಾಟಗಾರರನ್ನು ಹತ್ತಿಕ್ಕಲು ಪೊಲೀಸರನ್ನು ಬಳಸಿಕೊಂಡಿದ್ದಾರೆ ಇದನ್ನೆಲ್ಲಾ ಸಹಿಸುವುದಿಲ್ಲ ಎಂದು ನಾರಾಯಣ ಗೌಡ ತಿಳಿಸಿದರು.

