ಅಪ್ರಾಪ್ತ ಹೆಣ್ಣುಮಕ್ಕಳ ಮದುವೆ ತಪ್ಪಿಸಲು ಸಿಎಂ ಆದೇಶ

ಬೆಂಗಳೂರು: ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಕೋಲಾರ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.

ಜಿಲ್ಲೆಯಲ್ಲಿ ಅಪ್ರಾಪ್ತ ಹೆಣ್ಣುಮಕ್ಕಳ ಮದುವೆ ತಪ್ಪಿಸಬೇಕು, ಈ ಪ್ರಮಾಣ ಹೆಚ್ಚಾಗಿದ್ದು ಹೇಗೆ ಎಂದು ಪತ್ರಿಕಾ ವರದಿಯನ್ನು ತೋರಿಸಿ ಅಧಿಕಾರಿಗಳನ್ನು ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮತ್ತು ಪೊಲೀಸ್ ಅಧಿಕಾರಿಗಳಿಂದಲೂ ಸ್ಪಷ್ಟ ಉತ್ತರ ಬರದಿದ್ದಾಗ ಘಟನೆಗಳು ಮರುಕಳಿಸಕೂಡದು, ಮರುಕಳಿಸಿದರೆ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕ್ರಮ ಖಚಿತ ಎಂದು ಎಚ್ಚರಿಸಿದರು.

ಬ್ರೂಣ ಹತ್ಯೆ ಕಡ್ಡಾಯವಾಗಿ ತಪ್ಪಿಸಬೇಕು ಎಂದು ಎಸ್ಪಿ ಗೆ ಸಿಎಂ ಸೂಚಿಸಿದರು. ಇದಕ್ಕೆ ಉತ್ತರಿಸಿದ ಅಧಿಕಾರಿಗಳು ನಿಯಮ ಉಲ್ಲಂಘಿಸಿದವರ ಮೇಲೆ ಎಫ್ ಐ ಆರ್ ದಾಖಲಾಗಿದೆ ಎಂದು ವಿವರಗಳನ್ನು ನೀಡಿದರು.

ಬರಗಾಲ, ಕುಡಿಯುವ ನೀರು, ಗ್ರಾಮೀಣಾಭಿವೃದ್ಧಿ, ಕೆ.ಸಿ.ವ್ಯಾಲಿ, ಎಲಗೋಡು ಕುಡಿಯುವ ನೀರಿನ ಯೋಜನೆ, ಸಮಾಜ ಕಲ್ಯಾಣ ಇಲಾಖೆ, ಕಾನೂನು ಸುವ್ಯವಸ್ಥೆ ಕುರಿತು ಸಭೆಯಲ್ಲಿ ಆದ್ಯತೆ ಮೇಲೆ ಚರ್ಚೆ ನಡೆಯಿತು.