ಬೆಂಗಳೂರು: ಸಂಸದ ಪ್ರತಾಪ್ ಸಿಂಹ ಅವರ ವಿರುದ್ಧ ಸೇಡು ತೀರಿಸಿಕೊಳ್ಳುವ ಹಾಗೂ ಅವರನ್ನು ಲೋಕಸಭೆ ಚುನಾವಣೆ ಕಣದಿಂದ ತಪ್ಪಿಸಲು ಸ್ವತಃ ಮುಖ್ಯಮಂತ್ರಿ ಅವರೇ ಷಡ್ಯಂತ್ರ ರೂಪಿಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಗಂಭೀರ ಆರೋಪ ಮಾಡಿದರು.
ಲೋಕಸಭೆ ಚುನಾವಣೆಯಲ್ಲಿ ಗೆಲ್ಲುವ ಒಂದೇ ಉದ್ದೇಶದಿಂದ ಕಾಂಗ್ರೆಸ್ ಸರ್ಕಾರ ರಾಮಭಕ್ತರನ್ನು ಹಾಗೂ ವಿರೋಧ ಪಕ್ಷದ ನಾಯಕರನ್ನು ಟಾರ್ಗೆಟ್ ಮಾಡಿ, ಕಿರುಕುಳ ನೀಡುತ್ತಿದೆ ಎಂದು ಹೆಚ್ ಡಿಕೆ ಆರೋಪ ಮಾಡಿದರು.
ಹಿಂದೂ ಕಾರ್ಯಕರ್ತ ಶ್ರೀಕಾಂತ್ ಪೂಜಾರಿ ಹಾಗೂ ಸಂಸದ ಪ್ರತಾಪ್ ಸಿಂಹ ಅವರಿಗೆ ಸರಕಾರ ಕಿರುಕುಳ ನೀಡುತ್ತಿರುವುದು ಕಾಂಗ್ರೆಸ್ ಮತ್ತು ಸಿದ್ದರಾಮಯ್ಯ ಅವರ ಷಡ್ಯಂತ್ರದ ಭಾಗವಾಗಿದೆ ಎಂದು ಅವರು ಆರೋಪ ಮಾಡಿದರು.
5 ಜನ ಅರಣ್ಯ ಅಧಿಕಾರಿಗಳನ್ನ ಅಮಾನತು ಮಾಡಿದ್ದಾರೆ. ಅಮಾನತು ಆದ ಕಾರಣ ಏನು? ಬೇಲೂರಿನ ಒಂದು ಗ್ರಾಮದಲ್ಲಿ ಪೂರ್ವ ಅನುಮತಿ ಇಲ್ಲದೆ ಮರ ಕಡಿದಿರೋ ಹಿನ್ನಲೆಯಲ್ಲಿ ವರದಿ ಹೋಗಿದೆ. ವರದಿಯಲ್ಲಿ ಸರ್ಕಾರದ ಭೂಮಿಯಲ್ಲಿ ಕಟ್ಟಿರೋ ಮನೆಗಳ ಸಕ್ರಮೀಕರಣ ಮಾಡೋಕೆ ಮನೆಗಳ ಬಗ್ಗೆ ವರದಿ ತಹಶಿಲ್ದಾರರಿಗೆ ಕೊಟ್ಟಿದ್ರು. 40 ಎಕರೆ ಭೂಮಿಯನ್ನ 16 ಜನಕ್ಕೆ ಹಕ್ಕುಪತ್ರಗಳನ್ನ ಕೊಟ್ಟಿದ್ದಾರೆ. 4 ಎಕರೆ 12 ಗುಂಟೆ ಗೋಮಾಳ ಆಗಿದೆ.16 ನೇ ವ್ಯಕ್ತಿ ರಾಕೇಶ್ ಶೆಟ್ಟಿಗೆ 4 ಎಕರೆ ಭೂಮಿ ಕೊಟ್ಟಿದ್ದಾರೆ ಸರ್ಕಾರದಿಂದ. ಅವರ ಮಗಳು ಜಯಮ್ಮ ವಿಕ್ರಮ ಸಿಂಹಗೆ ಶುಂಠಿ ಬೆಳೆಯೋಕೆ ಲೀಸ್ ಕೊಟ್ಟಿದ್ದಾರೆ.ಲೀಸ್ ಪ್ರಾರಂಭ ಆಗೋದು 2024 ಜನವರಿಯಿಂದ. ಜಯಮ್ಮ ಮತ್ತು ರವಿ ಅನ್ನೋರು ಈ ಮಧ್ಯೆ ಮರ ಕಡಿದಿದ್ದಾರೆ. ಇದಕ್ಕೆ ವಿಕ್ರಂ ಸಿಂಗ್ ಕಾರಣ ಅಲ್ಲ ಎಂದು ಅವರು ಹೇಳಿದರು.
ಮರ ಕಡಿದ ಆರೋಪಕ್ಕೆ ಗುರಿ ಆಗಿರುವ ಸಂಸದ ಪ್ರತಾಪ್ ಸಿಂಹ ಅವರ ಸಹೋದರ ವಿಕ್ರಂ ಸಿಂಹ ಅವರ ಮೇಲೆ ಸರಕಾರ ನಡೆಸುತ್ತಿರುವ ದಬ್ಬಾಳಿಕೆ ಬಗ್ಗೆ ಹಲವಾರು ಅನುಮಾನಗಳು ಇವೆ. ಎ1, ಎ2 ಎಂದು ಜಯಮ್ಮ, ರಾಕೇಶ್ ಶೆಟ್ಟಿ ಹೆಸರು ಉಲ್ಲೇಖ ಮಾಡಿದ್ದಾರೆ. ಕೇಸ್ ನಲ್ಲಿ ಎ3 ಇರಲಿಲ್ಲ. ಅಲ್ಲಿ ಸ್ಥಳೀಯ ಒಬ್ಬ ಪುಢಾರಿ ಸಿಎಂಗೆ ಮಾಹಿತಿ ಕೊಟ್ಟು ಪ್ರತಾಪ್ ಸಿಂಹ ಗೆ ಪಾಠ ಕಲಿಸಬೇಕು ಎಂದು ಅಂತ ತಲೆ ತಿಂದ. ವಿವೇಚನೆ ಕಳೆದುಕೊಂಡ ಸಿಎಂ ಸಿದ್ದರಾಮಯ್ಯ ಆಗ ಅಧಿಕಾರಿಗಳಿಗೆ ಕರೆ ಮಾಡಿ ಬೀಟೆ ಮರ ಕಡಿದು ಅ ಜಾಗದಲ್ಲಿ ಹಾಕುವಂತೆ ಹೇಳಿದ್ದರು ಎಂದು ಮುಖ್ಯಮಂತ್ರಿ ಮೇಲೆ ಕುಮಾರಸ್ವಾಮಿ ನೇರ ಆರೋಪ ಮಾಡಿದರು.
ಸಿಎಂ ಅವರು ಸಾಚಾ ಆಗಿದ್ದರೆ ಹೇಳಲಿ. ಅವರ ಪೋನ್ ಕಾಲ್ ಲೀಸ್ಟ್ ತೆಗೆಯಿರಿ, ಸತ್ಯ ಗೊತ್ತಾಗುತ್ತದೆ ಎಂದು ಅವರು ದೂರಿದರು.
ಅನಗತ್ಯವಾಗಿ ಪ್ರತಾಪ್ ಸಿಂಹ ಅವರ ಸಹೋದರನ ಮೇಲೆ ಕೇಸ್ ಹಾಕಿ ಜೈಲಿಗೆ ಹಾಕಿದ್ದಾರೆ. ಇದರ ಸತ್ಯಾಸತ್ಯತೆ ಏನಿದೆ ಎಂಬುದು ಹೊರಗೆ ಬರಲಿ. ಕಾಂಗ್ರೆಸ್ ನವರು ವಿರೋಧಿಗಳ ದನಿ ಅಡಗಿಸೋಕೆ ಅಧಿಕಾರ ದುರ್ಬಳಕೆ ಮಾಡಿಕೊಳ್ತಿದ್ದಾರೆ.ಕರ ಸೇವಕರ ಮೇಲೆ ದೌರ್ಜನ್ಯ. ಇದು ನಾಚಿಕೆಗೇಡು. ವಿಕ್ರಂಸಿಂಹ ಮೇಲಿನ ಪ್ರಕರಣ ಅಧಿಕಾರ ದುರ್ಬಳಕೆಯ ಪರಮಾವಧಿ ಎಂದು ಅವರು ಕಿಡಿ ಕಾರಿದರು.
ಮಂಡ್ಯದಲ್ಲಿ ವಿಧಾನ ಪರಿಷತ್ ಸದಸ್ಯರೊಬ್ಬರು ಸರಕಾರಿ ಜಮೀನಿನಲ್ಲಿ ಮರ ಕಡಿದರು. ಅವರ ಮೇಲೆ ಯಾಕೆ ಕ್ರಮ ಆಗಿಲ್ಲ. ಇದಕ್ಕೆ ಸಿಎಂ, ಗೃಹ ಸಚಿವರೇ ಉತ್ತರ ಕೊಡಬೇಕು ಎಂದು ಅವರು ಒತ್ತಾಯ ಮಾಡಿದರು.
ಸರಕಾರ ಮಾಡಿದ ತಪ್ಪಿಗೆ ದಲಿತ ಅಧಿಕಾರಿಗೆ ಶಿಕ್ಷೆ ಕೊಡಲಾಗಿದೆ. ಅಮಾನತು ಆಗಿರುವ DFO ದಲಿತ ಸಮುದಾಯದ ಅಧಿಕಾರಿ. ಯಾಕೆ ಈ ಅಧಿಕಾರಿಯನ್ನು ಅಮಾನತು ಮಾಡಿದಿರಿ. ಈತ ಪ್ರಾಮಾಣಿಕ ದಲಿತ ಅಧಿಕಾರಿ. ಅವರ ಮೇಲೆ ಯಾಕೆ ಕ್ರಮ ಆಯಿತು?ಹಾಸನಕ್ಕೆ ಯಾರ ಶಿಫಾರಸು ಮೇರೆಗೆ ಅವರನ್ನು ಪೋಸ್ಟಿಂಗ್ ಮಾಡಿದಿರಿ? ಅವರನ್ನು ಹಾಸನಕ್ಕೆ ಹಾಕಿಸಲು ಯಾವ ಎಂಎಲ್ ಎ ಬಂದು ಕೂತಿದ್ದ? ಆ ಶಾಸಕ ಆ ಅಧಿಕಾರಿಯಿಂದ ಎಷ್ಟು ಹಣ ತೆಗೆದುಕೊಂಡ?ಯಶವಂತಪುರದಲ್ಲಿ ಹಣ ವ್ಯವಹಾರ ಆಗಿದೆ. ಯಶವಂತಪುರದಲ್ಲಿ ಹಣದ ಡೀಲ್ ಆಗಿದೆ. ಅದನ್ನು ಹೊರಗೆ ತೆಗೆಯುವಿರಾ? ಎಂದು ಸಿದ್ದರಾಮಯ್ಯ ಅವರಿಗೆ ಹೆಚ್ ಡಿಕೆ ನೇರ ಸವಾಲು ಹಾಕಿದರು.
ಸಿಎಂ ಆದೇಶದಂತೆ ಬೀಟೆ ಮರವನ್ನು ಗೆಂಡೆಕೆರೆಯಿಂದ ಕಟ್ ಮಾಡಿಕೊಂಡು ಬಂದು ಇಲ್ಲಿ ಹಾಕೋಕೆ ಸಿಎಂ ಹೇಳಿದ್ದಾರೆ.ಪ್ರತಾಪ್ ಸಿಂಹನ ಸಹೋದರ ಮರ ಕಡಿದಿಲ್ಲ. ಸಿಎಂ ಹೇಳಿ ಮರ ಕಡಿಸಿ ಹಾಕಿಸಿ ಪ್ರತಾಪ್ ಸಿಂಹ ಹೆದರಿಸೋಕೆ ಹೀಗೆ ಮಾಡಿದ್ದಾರೆ ಎಂದು ಕುಮಾರಸ್ವಾಮಿ ಅವರು ಹೇಳಿದರು.
ಮಾಜಿ ಸಿಎಂ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷರಾದ ಹೆಚ್.ಡಿ.ಕುಮಾರಸ್ವಾಮಿ, ಕೋರ್ ಕಮಿಟಿ ಅಧ್ಯಕ್ಷರಾದ ಜಿ.ಟಿ.ದೇವೇಗೌಡ, ಮಾಜಿ ಸಚಿವ ಬಂಡೆಪ್ಪ ಕಾಶಂಪೂರ್, ಮಾಜಿ ಸಂಸದ ಕುಪೆಂದ್ರ ರೆಡ್ಡಿ, ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ, ಜೆಡಿಎಸ್ ನಗರ ಘಟಕದ ಅಧ್ಯಕ್ಷ ಹೆಚ್. ಎಂ.ರಮೇಶ್ ಗೌಡ, ಮಾಜಿ ಶಾಸಕರಾದ ಮಹದೇವು, ಅಶ್ವಿನ್ ಕುಮಾರ್, ಜೆಡಿಎಸ್ ರಾಜ್ಯ ಕಾನೂನು ಘಟಕದ ಅಧ್ಯಕ್ಷ ಎ.ಪಿ.ರಂಗನಾಥ್ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

