ನವದೆಹಲಿ: ಅಯೋಧ್ಯೆಯ ರಾಮ ಮಂದಿರದಲ್ಲಿ ಜನವರಿ 22 ರ ಪ್ರಾಣ ಪ್ರತಿಷ್ಠಾಪನೆ ಪ್ರಯುಕ್ತ 11 ದಿನಗಳ ಕಾಲ ಪ್ರಧಾನಿ ನರೇಂದ್ರ ಮೋದಿಯವರು ಕಟ್ಟುನಿಟ್ಟಾದ ವ್ರತ ಪ್ರಾರಂಭಿಸಿದ್ದಾರೆ.
ಅಯೋಧ್ಯೆಯಲ್ಲಿ ರಾಮ್ ಲಲ್ಲಾ ಪ್ರಾಣ ಪ್ರತಿಷ್ಠೆಗೆ ಕೇವಲ 11 ದಿನಗಳು ಉಳಿದಿವೆ. ಈ ಶುಭ ಸಮಾರಂಭಕ್ಕೆ ಸಾಕ್ಷಿಯಾಗುವ ಸೌಭಾಗ್ಯ ನನ್ನದು ಎಂದು ಮೋದಿ ತಿಳಿಸಿದ್ದಾರೆ.
ಸಮಾರಂಭದಲ್ಲಿ ಭಾರತದ ಜನರನ್ನು ಪ್ರತಿನಿಧಿಸಲು ಭಗವಂತ ನನ್ನನ್ನು ಕೇಳಿದ್ದಾನೆ. ಅದನ್ನು ಗಮನದಲ್ಲಿಟ್ಟುಕೊಂಡು ನಾನು ಇಂದಿನಿಂದ 11 ದಿನಗಳ ವಿಶೇಷ ಆಚರಣೆಯನ್ನು ಪಂಚವಟಿಯ ನಾಸಿಕ್ ಧಾಮದಿಂದ ಪ್ರಾರಂಭಿಸಿದ್ದೇನೆ ಎಂದು ಹೇಳಿದ್ದಾರೆ
ಇದಕ್ಕಾಗಿ ನಾನು ಎಲ್ಲರ ಆಶೀರ್ವಾದ ಕೋರುತ್ತೇನೆ. ಈ ಕ್ಷಣದಲ್ಲಿ ನನ್ನ ಭಾವನೆಗಳನ್ನು ಪದಗಳಲ್ಲಿ ವ್ಯಕ್ತಪಡಿಸುವುದು ತುಂಬಾ ಕಷ್ಟ, ಆದರೆ ನಾನು ನನ್ನ ಕಡೆಯಿಂದ ಪ್ರಯತ್ನಿಸಿದ್ದೇನೆ ಎಂದು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಆಡಿಯೋ ಸಂದೇಶದಲ್ಲಿ ಪ್ರಧಾನಿ ಹೇಳಿದ್ದಾರೆ.
ವ್ರತದ ಮಹತ್ವ ಏನು: ಹಿಂದೂ ಶಾಸ್ತ್ರಗಳ ಪ್ರಕಾರ, ದೇವರ ವಿಗ್ರಹದ ‘ಪ್ರಾಣ ಪ್ರತಿಷ್ಠೆ’ ಒಂದು ವಿವರವಾದ ಆಚರಣೆಯಾಗಿದೆ. ಇದಕ್ಕೂ ಮುನ್ನ ಸಾಕಷ್ಟು ನಿಯಮಗಳನ್ನು ಅನುರಿಸಬೇಕಾಗುತ್ತದೆ.
ಹೀಗಾಗಿ ಪ್ರಧಾನಿ ನರೇಂದ್ರ ಮೋದಿಯವರು ಹಲವು ಜವಾಬ್ದಾರಿಗಳ ನಡುವೆಯೂ ಎಲ್ಲಾ ಆಚರಣೆಗಳನ್ನು ಕಟ್ಟುನಿಟ್ಟಾಗಿ ಅನುಸರಿಸಲು ನಿರ್ಧರಿಸಿದ್ದಾರೆ. ಅದರ ಫಲವಾಗಿ 11 ದಿನಗಳ ವ್ರತವನ್ನು ಇಂದಿನಿಂದ ಪ್ರಾರಂಭಿಸಿದ್ದಾರೆ.
ಹಿಂದೂ ಧರ್ಮಗ್ರಂಥಗಳಲ್ಲಿ, ಉಪವಾಸಕ್ಕಾಗಿ ನಿರ್ದಿಷ್ಟ ಸೂಚನೆಗಳನ್ನು ನೀಡಲಾಗಿದೆ. ಅಂತೆಯೇ ತಮ್ಮ ದೈನಂದಿನ ದಿನಚರಿಯ ಭಾಗವಾಗಿ ಪ್ರಧಾನಿಯವರು ಬ್ರಹ್ಮ ಮುಹೂರ್ತ ಜಾಗರಣ, ಪ್ರಾರ್ಥನೆಗಳು ಮತ್ತು ಸರಳ ಆಹಾರದಂತಹ ಆಚರಣೆಗಳನ್ನು ಅನುಸರಿಸುತ್ತಿದ್ದಾರೆ.
ಜನವರಿ 22 ರಂದು ವಾರಣಾಸಿಯ ಅರ್ಚಕರಾದ ಲಕ್ಷ್ಮೀಕಾಂತ್ ದೀಕ್ಷಿತ್ ಅವರು ಮುಖ್ಯ ಪ್ರಾಣ ಪ್ರತಿಷ್ಠಾ ಸಮಾರಂಭವನ್ನು ನಿರ್ವಹಿಸಲಿದ್ದಾರೆ.

