ಬೆಂಗಳೂರು: ನಿಗಮ ಮಂಡಳಿ ನೇಮಕಾತಿ ಪಟ್ಟಿ ಸಿದ್ದವಾಗಿದ್ದು ಯಾವುದೇ ಕ್ಷಣದಲ್ಲಿ ಪಟ್ಟಿ ಪ್ರಕಟವಾಗಬಹುದು ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಈ ಬಗ್ಗೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪಟ್ಟಿ ಅಂತಿಮವಾಗಿದೆ, ಈ ಕ್ಷಣವೇ ಬಿಡುಗಡೆ ಆದರೂ ಆಗಬಹುದು, ನಿನ್ನೆಯೂ ಹೇಳಿದ್ದೆ, ಇವತ್ತೂ ಅದನ್ನೇ ಹೇಳುತ್ತಿದ್ದೇನೆ ಎಂದು ತಿಳಿಸಿದರು.
36 ಶಾಸಕರು, 39 ಕಾರ್ಯಕರ್ತರ ಹೆಸರನ್ನು ಪ್ರಕಟಿಸಲಾಗುವುದು ಎಂದು ಡಿ. ಕೆ ಶಿವಕುಮಾರ್ ತಿಳಿಸಿದರು.
ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಸಚಿವರು ನಿರಾಕರಿಸಿದ್ದಾರಲ್ಲಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಪಕ್ಷದ ಹೈಕಮಾಂಡ್ ಹೇಳುವುದನ್ನು ನಾನೂ ಕೇಳಬೇಕು, ಸಚಿವರು ಕೇಳಬೇಕಾಗುತ್ತದೆ. ಪಕ್ಷ ಹೇಳಿದಂತೆ ಎಲ್ಲರೂ ಕೇಳಲೇಬೇಕು ಎಂದು ಪರೋಕ್ಷವಾಗಿ ಸಚಿವರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲೇಬೇಕಾಗುತ್ತದೆ ಎಂದು ಹೇಳಿದರು.

