ಮೈಸೂರಿನ ಶಿಲ್ಪಿ ಅರುಣ್ ಕೆತ್ತಿರುವ ರಾಮಲಲ್ಲಾ ವಿಗ್ರಹ ನೋಡಲು ಸುಂದರ

ಅಯೋಧ್ಯೆ: ಅಯೋಧ್ಯೆಯ ಶ್ರೀ ರಾಮಮಂದಿರದಲ್ಲಿ ಜ.22 ರಂದು ಪ್ರತಿಷ್ಠಾಪನೆಯಾಗಲಿರುವ ರಾಮಲಲ್ಲಾ  ವಿಗ್ರಹದ ಮೊದಲ ಚಿತ್ರ ವೈರಲ್‌ ಆಗಿದ್ದು ಕೋಟ್ಯಂತರ ಮಂದಿ ವೀಕ್ಷಿಸಿ ಭಕ್ತಿ ಸಮರ್ಪಿಸುತ್ತಿದ್ದಾರೆ.

ಬಾಲ ರಾಮನ ಈ ವಿಗ್ರಹವನ್ನು ಮೈಸೂರಿನ ಶಿಲ್ಪಿ ಅರುಣ್‌ ಯೋಗಿರಾಜ್‌ ಅವರು ಕೆತ್ತನೆ ಮಾಡಿದ್ದಾರೆ.

ಜನವರಿ 22 ರಂದು ಪ್ರಾಣ ಪ್ರತಿಷ್ಠಾಪನಾ ಸಮಾರಂಭ ನಡೆಯಲಿದೆ, ಇಂದು ಅಯೋಧ್ಯೆಯ ರಾಮಮಂದಿರದ ಗರ್ಭಗುಡಿಯಲ್ಲಿ ಭಗವಾನ್ ರಾಮನ ವಿಗ್ರಹವನ್ನು ಇರಿಸಲಾಗಿದೆ.

ದೇವರನ್ನು ಐದು ವರ್ಷದ ಮಗುವಿನಂತೆ ನಿಂತಿರುವ ಭಂಗಿಯಲ್ಲಿ ರೂಪಿಸಲಾಗಿದೆ. ಈಗ ವಿಗ್ರಹದ ಕಣ್ಣಿಗೆ ಬಟ್ಟೆ ಕಟ್ಟಲಾಗಿದೆ. ಪ್ರಾಣ ಪ್ರತಿಷ್ಠೆ ದಿನದಂದು ವಿಗ್ರಹದ ಕಣ್ಣಿಗೆ ಕಟ್ಟಿರುವ ಬಟ್ಟೆಯನ್ನು ತೆಗೆಯಲಾಗುವುದು.

ಮೈಸೂರಿನ ಕಲಾವಿದ ಅರುಣ್ ಯೋಗಿರಾಜ್ ಅವರು ಕಪ್ಪು ಕಲ್ಲಿನಿಂದ 51 ಇಂಚಿನ ವಿಗ್ರಹವನ್ನು ಕೆತ್ತನೆ ಮಾಡಿದ್ದಾರೆ.

ರಾಮ ಲಲ್ಲಾ ಕೈನಲ್ಲಿ ಚಿನ್ನದ ಬಿಲ್ಲು-ಬಾಣವನ್ನು ಪ್ರತಿಷ್ಟಾಪನಾ ದಿನವಾದ ಜನವರಿ 22 ರಂದು ಅಳವಡಿಸಲಾಗುತ್ತದೆ.

ಈ ಬಾಲ ರಾಮನ ವಿಗ್ರಹದ ಪ್ರಭಾವಳಿಯಲ್ಲಿ ದಶಾವತಾರ,ನವಗ್ರಹಗಳು ಮತ್ತು ಕೆಳ ಭಾಗದಲ್ಲಿ ದ್ವಾರ ಪಾಲಕರನ್ನು ಶಿಲ್ಪಿ ಅರುಣ್ ಯೋಗಿರಾಜ್ ಸುಂದರವಾಗಿ ಕೆತ್ತಿದ್ದಾರೆ.

ಮಂತ್ರಘೋಷಗಳೊಂದಿಗೆ ರಾಮಲಲ್ಲಾ ಮೂರ್ತಿಯನ್ನು ಗರ್ಭಗುಡಿಯಲ್ಲಿ ಇರಿಸಲಾಗಿದೆ.