ಒಕ್ಕಲಿಗ ಸಮುದಾಯಕ್ಕೆ ನೀಡಿದ್ದ ಮೀಸಲಾತಿ ಕಡಿಮೆ ಮಾಡಿ, ಮುಸ್ಲಿಂ ಸಮುದಾಯಕ್ಕೆ ಮೀಸಲಾತಿ ಕೊಟ್ಟಿದ್ದು ನಾನು -ಹೆಚ್.ಡಿ.ಡಿ.

ಹಾಸನ: ಅಂದು ಒಕ್ಕಲಿಗ ಸಮುದಾಯಕ್ಕೆ  ನೀಡಿದ್ದ ಮೀಸಲಾತಿಯನ್ನು ಕಡಿಮೆ ಮಾಡಿ, ಮುಸ್ಲಿಂ ಸಮುದಾಯಕ್ಕೆ ಮೀಸಲಾತಿ ಕೊಟ್ಟಿದ್ದು ನಾನು ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ತಿಳಿಸಿದ್ದಾರೆ.

ಹಾಸನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ದೇವೆಗೌಡರು, ರಾಜ್ಯ ಸರ್ಕಾರ ಸಾಮಾಜಿಕ ನ್ಯಾಯ ಒದಗಿಸಲು ಒಳಮೀಸಲಾತಿ ಕೊಡಬೇಕೆಂದು ಸಚಿವ ಸಂಪುಟ ಸಭೆ ತುರ್ತು ನಿರ್ಣಯ ಮಾಡಿ ಈಗ ಕೇಂದ್ರ ಸರ್ಕಾರಕ್ಕೆ ಕಳುಹಿಸಿದೆ. ಈ ಕೆಲಸವನ್ನು ನಾನು ನನ್ನ ಅಧಿಕಾರ ಅವಧಿಯಲ್ಲೇ ಮಾಡಿದ್ದೆ ಎಂದು ಸ್ಪಷ್ಟಪಡಿಸಿದರು.

ಅಂದು ಮುಸ್ಲಿಮರಿಗೆ ಮೀಸಲಾತಿ ಕೊಟ್ಟಿದ್ದು ದೇವೇಗೌಡ, ನಾನು ಅಧಿಕಾರದಲ್ಲಿದ್ದಾಗ ಒಕ್ಕಲಿಗರಿಗೆ ನೀಡಿದ್ದನ್ನು ಕಡಿಮೆ ಮಾಡಿ, ಮುಸ್ಲಿಮರಿಗೆ ಮೀಸಲಾತಿ ಕೊಟ್ಟೆ ಇದನ್ನು ನಿರ್ಣಯ ಮಾಡಿದ್ದು ನಾನೇನೆ ಎಂದು ಹೇಳಿದರು.

ಗುಂಡೂರಾವ್‌ ಸರ್ಕಾರದಲ್ಲಿ ಅಂಬೇಡ್ಕರ್ ಅವರು ನೀಡಿದ್ದ ಶೇ 18 ರ ಮೀಸಲಾತಿಯಲ್ಲಿ ಎಸ್ಸಿಗೆ 15%, ಎಸ್ಟಿಗೆ 3% ನೀಡಿದ್ದರು. ಆದರೆ ಆ ಕೋಟಾ ಭರ್ತಿ ಮಾಡಲಿಲ್ಲ. ನಂತರ ನಾನು 1983ರಲ್ಲಿ ಲೋಕೋಪಯೋಗಿ ಸಚಿವನಾದಾಗ ಅಂಬೇಡ್ಕರ್ ಕೊಟ್ಟಂತಹ ಕೋಟಾ ಭರ್ತಿಯಾಗಲು 15% ಮೀಸಲಾತಿಯನ್ನು 18%ಗೆ ಹೆಚ್ಚಿಸಿದೆ. 3% ಇದ್ದ ಎಸ್ಟಿ ಮೀಸಲಾತಿಯನ್ನು 5%ಗೆ ಹೆಚ್ಚಿಸಿದೆ ಎಂದು ವಿವರಿಸಿದರು.

ಅಂಬೇಡ್ಕರ್ ಅವರ ಆಶಯದಂತೆ ಆ ಕೋಟಾ ಗುರಿಮುಟ್ಟುವವರೆಗೂ ಕೆಲಸ ಮಾಡಿದ್ದೇನೆ. ಅದು ಖಾಯಂ ಆಗಿರಬೇಕು ಅಂತ ಮಾಡಿದ್ದೆ. ಇದು ಎಲ್ಲಾ ಇಲಾಖೆಗಳ ಮೇಲೆ ಪರಿಣಾಮ ಬೀರುತ್ತೆ ಅಂತ ಎಲ್ಲರೂ ಹೇಳಿದ್ದರು, ಆದರೂ ನಾನು ಮೀಸಲಾತಿ ಹೆಚ್ಚಿಸಿದ್ದೆ ಎಂದು ಹೇಳಿದರು.

ಕಾಂಗ್ರೆಸ್‌ ನೇತೃತ್ವದ ರಾಜ್ಯ ಸರ್ಕಾರ ಒಳಮೀಸಲಾತಿ ಬಗ್ಗೆ ಇವತ್ತು ಕೇಂದ್ರ ಸರ್ಕಾರಕ್ಕೆ ಕಳುಹಿಸಿದೆ, ಅಹಿಂದ ಅಹಿಂದ ಅಂತ ಹೇಳಿದ್ದೇ, ಹೇಳಿದ್ದು, ದೇವೇಗೌಡರು ಈ ರಾಜ್ಯದಲ್ಲಿ ಏನು ಮಾಡಿದ್ರು ಅನ್ನೋದನ್ನ ಮರೆಮಾಚುವ ಕೆಲಸ ಮಾಡಿಬಿಟ್ಟರು ಎಂದು  ದೇವೇಗೌಡರು ಗರಂ ಆದರು.

ಏಕೆಂದರೆ ನಾನೊಬ್ಬ ಒಕ್ಕಲಿಗ ಅದಕ್ಕೆ ಹಾಗೆ ಮಾಡಿದ್ರು, ಬೇಕಿದ್ದರೆ ಇದೆಲ್ಲದರ ಬಗ್ಗೆ ಚರ್ಚೆಯಾಗಲಿ ಎಂದು ಸವಾಲು ಹಾಕಿದರು.