ಅಯೋಧ್ಯೆ: ಸಾಧು ಸಂತರ ತಪಸ್ಸಿಗೆ ವರ ಸಿಕ್ಕಿದರೆ,ರಾಮಭಕ್ತರ 500 ವರ್ಷಗಳ ಕನಸು ಇಂದು ನನಸಾಗಿದೆ.
ಕೋಟ್ಯಂತರ ಭಕ್ತರಿಗೆ ಭಗವಾನ್ ರಾಮ ಕೊನೆಗೂ ಇಂದು ದರ್ಶನ ನೀಡಿದ್ದಾನೆ. ಅಯೋಧ್ಯೆ ಅಷ್ಟೇ ಅಲ್ಲ ಇಡೀ ದೇಶ ಅಕ್ಷರಶಃ ರಘುರಾಮನ ಭಕ್ತಿಯಲ್ಲಿ ಮಿಂದೆದ್ದಿತು.
ಅಯೋಧ್ಯೆ ರಾಮಮಂದಿರದಲ್ಲಿ ಶಾಸ್ತ್ರೋಕ್ತವಾಗಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ನೆರವೇರಿತು.
ಪುಣ್ಯಪುರುಷ ರಾಮಲಲ್ಲಾನನ್ನು ಕಣ್ತುಂಬಿಕೊಂಡು ಭಕ್ತರು ಪುನೀತರಾದರು.
ಸರಿಯಾಗಿ 12 ಗಂಟೆ 30 ನಿಮಿಷ 32 ಸೆಕೆಂಡು ಶುಭಘಳಿಗೆಯಲ್ಲಿ ಅಭಿಜಿತ್ ಮುಹೂರ್ತದಲ್ಲಿ (ʼಅಭಿಜಿತ್ʼ ಅಂದರೆ ʼಜಯಶಾಲಿʼ ಎಂದರ್ಥ) ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ನೆರವೇರಿತು.
ಈ ವೇಳೆಯಲ್ಲಿ ಜಯ ಘೋಷ ಮೊಳಗಿತು ರಾಮಾ, ರಾಮಾ, ಶ್ರೀ ರಾಮ ಜಯ ರಾಮ ರಘುರಾಮ,ಲಲ್ಲಾ ಎಂಬ ಘೋಷಣೆಗಳನ್ನು ಭಕ್ತರು ಹೃದಯ ತುಂಬಿ ಕೂಗುತ್ತಿದ್ದರು.
ಇಡೀ ದೇಶದ ಯಜಮಾನ ಪ್ರಧಾನಿ ನರೇಂದ್ರ ಮೋದಿಯವರ ಸಾರಥ್ಯದಲ್ಲಿ ಮೂಲ ವಿಗ್ರಹದ ಎದುರು ಧಾರ್ಮಿಕ ವಿಧಿ-ವಿಧಾನಗಳನ್ನು ನೆರವೇರಿಸಲಾಯಿತು.
ಗರ್ಭಗುಡಿಯಲ್ಲಿ ಪೂಜಾ-ಕೈಂಕರ್ಯಗಳು ನಡೆದವು. ಬಳಿಕ ಬಾಲರಾಮನ ಹಣೆಗೆ ಮೋದಿ ತಿಲಕವಿಟ್ಟರು. ಈ ಸಂದರ್ಭದಲ್ಲಿ ಶಂಖ, ಜಾಗಟೆಗಳು ಜಯಘೋಷಗಳು ಮೊಳಗಿದವು.
ಪ್ರಾಣ ಪ್ರತಿಷ್ಠಾಪನಾ ಸಂದರ್ಭದಲ್ಲಿ ಗರ್ಭಗುಡಿಯಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್, ರಾಜ್ಯಪಾಲರಾದ ಆನಂದಿ ಬೆನ್ ಪಟೇಲ್ ಹಾಗೂ ಅಯೋಧ್ಯೆಯ ಪ್ರಧಾನ ಅರ್ಚಕರು ಉಪಸ್ಥಿತರಿದ್ದರು.
ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ದಿನಕ್ಕಾಗಿ ಪ್ರಧಾನಿ ಮೋದಿ ಕಳೆದ 11 ದಿನಗಳಿಂದ ಕಠಿಣ ವ್ರತ ಕೈಗೊಂಡಿದ್ದರು.
ವ್ರತದ ನಡುವೆಯೇ ಹಲವಾರು ದೇಗುಲಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದರು.
ಇಡೀ ಅಯೋಧ್ಯ ನಗರಿ ರಾಮಭಕ್ತರು ಸಾಧು ಸಂತರು ಯೋಗಿಗಳು ಅಭಿಮಾನಿಗಳಿಂದ ತುಂಬಿಹೋಗಿತ್ತು.
ಸಿನಿಮಾ ತಾರೆಯರು,ಕ್ರೀಡಾಪಟುಗಳು ರಾಜಕೀಯ ವ್ಯಕ್ತಿಗಳು ಸೇರಿದಂತೆ ನೂರಾರು ಗಣ್ಯರು ಅದ್ಭುತವಾದ ರಾಮಲಲ್ಲಾ ಪ್ರಾಣಪತಿಷ್ಠಾಪನಾ ಕ್ಷಣಕ್ಕೆ ಸಾಕ್ಷಿಯಾದರು.

